ಮಾ.7 ರಂದು ಅತಿಥಿ ಶಿಕ್ಷಕರ ರಾಜ್ಯ ಮಟ್ಟದ ಹೋರಾಟ : ಮತದಾನ ಬಹಿಷ್ಕಾರದ ಎಚ್ಚರಿಕೆ

ಮಡಿಕೇರಿ ಮಾ.4 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.7 ರಂದು ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ರಾಜ್ಯ ಮಟ್ಟದ ಹೋರಾಟ ನಡೆಯಲಿದ್ದು, ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಸಂಚಾಲಕರು ಹಾಗೂ ಜಿಲ್ಲಾಧ್ಯಕ್ಷ ಎಂ.ಬಿ.ವಿಕ್ರಾಂತ್, ಸತತ ಏಳು ವರ್ಷಗಳಿಂದಲೂ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಸೇವಾ ಅನುಭವವನ್ನು ಹೊಂದಿರುವ ಶಿಕ್ಷಕರನ್ನು ಖಾಯಂ ಮಾಡುವಲ್ಲಿ ಸರ್ಕಾರ ಚಿಂತನೆ ನಡೆಸಿಲ್ಲ. ಡಿ.ಇಡಿ, ಬಿ.ಇಡಿ ತರಬೇತಿ ಪಡೆದು, ಶಾಲಾ ಶೈಕ್ಷಣಿಕ ಮತ್ತು ಆಡಳಿತ ವಿಚಾರ ಜ್ಞಾನ ಇದ್ದರೂ ಎಂಜಿನಿಯರ್ ಪದವೀಧರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿ ವರ್ಷ ನೇಮಕಗೊಂಡು ಮಾರ್ಚ್ ಅಂತ್ಯಕ್ಕೆ ಕರ್ತವ್ಯದಿಂದ ಬಿಡುಗಡೆಯಾಗುತ್ತಿರುವ ಅತಿಥಿ ಶಿಕ್ಷಕರು, ನಂತರದ ದಿನಗಳಲ್ಲಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಇಲಾಖೆಗಳ ಗುತ್ತಿಗೆ ನೌಕರರ ವೇತನಕ್ಕಿಂತ ಅತೀ ಕಡಿಮ್ಮೆ ವೇತನಕ್ಕೆ ಅತಿಥಿ ಶಿಕ್ಷಕರು ದುಡಿಯುತ್ತಿದ್ದು, ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಅಸಾಧ್ಯವಾಗಿದೆ. ಅಲ್ಲದೆ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ನಮ್ಮನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತರೆ ರಾಜ್ಯಗಳಲ್ಲಿ ಅತಿಥಿ ಶಿಕ್ಷಕರಿಗೆ ಕನಿಷ್ಟ ವೇತನ ನೀಡಲಾಗುತ್ತಿದ್ದು, ಶಿಕ್ಷಣ ಸುಧಾರಣೆಗಾಗಿ ಶಿಕ್ಷಕರ ಕೊರತೆಯನ್ನು ಸರಿದೂಗಿಸಲು ಅತಿಥಿ ಶಿಕ್ಷಕರನ್ನು ಖಾಯಂ ಗೊಳಿಸಲಾಗುತ್ತದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಶೈಕ್ಷಣಿಕ ವರ್ಷದ ಮಾರ್ಚ್ ಅಂತ್ಯಕ್ಕೆ ಬಿಡುಗಡೆ ಗೊಳಿಸದೆ ಅದೇ ಶಾಲೆಯಲ್ಲಿ ಕರ್ತವ್ಯದಲ್ಲಿ ಮುಂದುವರೆಸಬೇಕು. ಕನಿಷ್ಟ ವೇತನ ಒದಗಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, 2012-13ನೇ ಶೈಕ್ಷಣಿಕ ವರ್ಷದಿಂದ ಅತಿಥಿ ಶಿಕ್ಷಕರ ಹುದ್ದೆಯಿಂದ ವಂಚಿತರಾದವರಿಗೂ ಸೇವಾ ಭದ್ರತೆ ಒದಗಿಸಬೇಕು, ಶೈಕ್ಷಣಿಕ ವರ್ಷದ ಅರ್ಧದಲ್ಲಿ ಕೈಬಿಡದೆ ಹುದ್ದೆಯಲ್ಲಿ ಸರಿದೂಗಿಸುವಂತೆ ಒತ್ತಾಯಿಸಿ ಮಾ.7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಮತದಾನ ಬಹಿಷ್ಕಾರ : ರಾಜ್ಯದಲ್ಲಿ ಸುಮಾರು 30 ಸಾವಿರಕ್ಕಿಂತಲೂ ಹೆಚ್ಚಿನ ಅತಿಥಿ ಶಿಕ್ಷಕರಿದ್ದಾರೆ. ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಹಾಗೂ ಹುದ್ದೆಯಿಂದ ವಂಚಿತರಾದವರು ಇದ್ದು, ಕರ್ತವ್ಯಕ್ಕೆ ಗೈರಾಗಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ. ಆದರೆ, ಬೇಡಿಕೆಗಳು ಈಡೇರದೇ ಇದ್ದಲ್ಲಿ ರಾಜ್ಯಾದ್ಯಂತ ಅತಿಥಿ ಶಿಕ್ಷಕರು ಮತ್ತು ಅವರ ಕುಟುಂಬದವರು ಮತದಾನ ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಚಾಲಕ ವಿ.ಆರ್.ನಾಗರಾಜು, ಜಿಲ್ಲಾ ಸಂಚಾಲಕ ಬಿ.ಎ.ರೋಶನ್, ಕಾರ್ಯದರ್ಶಿ ಪಿ.ಆರ್.ರಾಜೇಶ್, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷೆ ಎನ್.ಪಿ.ದಿವ್ಯಶ್ರೀ, ಕಾರ್ಯದರ್ಶಿ ಪಿ.ಡಿ.ಮೇನಕ ಉಪಸ್ಥಿತರಿದ್ದರು.
