ಸೋಮವಾರಪೇಟೆಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ : ಟ್ರೋಫಿ ಅನಾವರಣ

ಸೋಮವಾರಪೇಟೆ ಮಾ.4 : ಒಕ್ಕಲಿಗರ ಯುವವೇದಿಕೆ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ 4ನೇ ವರ್ಷದ ಒಕ್ಕಲಿಗರ ಕಪ್ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಗೆ ಎಸ್.ಜಿ.ಮೇದಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಜನರ ಅಚ್ಚುಮೆಚ್ಚಿನ ಕ್ರೀಡೆ ಕಬಡ್ಡಿ. ಇಂತಹ ಪಂದ್ಯ್ಯಾವಳಿ ನಡೆಸುವುದರಿಂದ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡುತ್ತದೆ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗ್ರಾಮೀಣ ಕ್ರೀಡಾಕೂಟಕ್ಕೆ ಸರ್ಕಾರ ರೂ. 5 ಲಕ್ಷದ ಆರ್ಥಿಕ ನೆರವು ನೀಡಲು ಮುಂದೆ ಬಂದಿದೆ. ಮುಂದಿನ ಸಾಲಿನಲ್ಲಿ ಪಂದ್ಯಾವಳಿ ನಡೆಸಿದಲ್ಲಿ ಶೇ. 50ರಷ್ಟು ಖರ್ಚನ್ನು ಕ್ರೀಡಾ ಇಲಾಖೆ ಭರಿಸಲು ಮುಂದಾಗಿದೆ ಎಂದು ಹೇಳಿದರು.
ಯುವ ವೇದಿಕೆ ಅಧ್ಯಕ್ಷ ಕೆ.ಬಿ. ಸುರೇಶ್, ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು, ಪ್ರಮುಖರಾದ ಪಿ.ಕೆ.ರವಿ, ಬಿ.ಜೆ.ದೀಪಕ್, ಗಿರೀಶ್ ಮಲ್ಲಪ್ಪ, ಕೆ.ಎಂ.ಲೋಕೇಶ್, ಮಂಜೂರು ತಮ್ಮಣ್ಣಿ, ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ, ರಾಜ್ಯ ಕಬಡ್ಡಿ ತೀರ್ಪುಗಾರರ ಸಂಘದ ಅಧ್ಯಕ್ಷ ಷಣ್ಮುಗಂ, ರೆಫ್ರಿ ಬೋರ್ಡ್ ಸಂಚಾಲಕ ಶ್ರೀಧರ್ ಮತ್ತಿತರರು ಇದ್ದರು.
ಇದೇ ಸಂದರ್ಭ ಪಂದ್ಯಾವಳಿಯ ಟ್ರೋಫಿ ಅನಾವರಣ ಮಾಡಲಾಯಿತು.
