ಸಿಎನ್‌ಸಿಯಿಂದ ಮಹಿಳಾ ದಿನಾಚರಣೆಯಂದು ಕೊಡವ ಮಹಿಳಾ ಸಬಲೀಕರಣಕ್ಕಾಗಿ ಒತ್ತಾಯ

ಮಡಿಕೇರಿ ಮಾ.4 : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವಾದ ಮಾ.8 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ಮಹಿಳೆಯರ ಸಬಲೀಕರಣಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದೆಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬುಧವಾರ ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ಮಹಿಳೆಯರ ಪರವಾಗಿ ಹಕ್ಕೊತ್ತಾಯಗಳನ್ನು ಮಂಡಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಅತ್ಯಂತ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದ ಮಹಿಳೆಯರಿಗೆ ಸಂವಿಧಾನದತ್ತವಾದ ಹಕ್ಕುಗಳನ್ನು ನೀಡಬೇಕು. ಸ್ವಾಯತ್ತ ಕೊಡವ ಲ್ಯಾಂಡ್ ಘೋಷಿಸಬೇಕು, ನೆಲ, ಜಲ, ಭಾಷೆ, ಸಂಸ್ಕೃತಿ, ಪರಪಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯದೊಂದಿಗೆ ಸಾಂವಿಧಾನಿಕ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕು. ಕೊಡವರ ಜನ್ಮಸಿದ್ಧ ಹಕ್ಕಾಗಿರುವ ಕೋವಿ ಹೊಂದುವ ವಿನಾಯಿತಿಯನ್ನು ಶಾಶ್ವತಗೊಳಿಸಬೇಕು. ಆ ಮೂಲಕ ಆಡಳಿತ ವ್ಯವಸ್ಥೆಗಳು ಕೊಡವ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸುವುದಾಗಿ ನಾಚಪ್ಪ ತಿಳಿಸಿದ್ದಾರೆ.
