ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ : : ಕ್ರೀಡೆಯನ್ನು ಶಿಸ್ತಿನಿಂದ ಮುನ್ನಡೆಸಲು ಗಣ್ಯರ ಕರೆ

ನಾಪೋಕ್ಲು ಮಾ.6 : ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹೊದವಾಡ ಓಯಸಿಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ 19ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಕಳೆದ 19ವರ್ಷದಿಂದ ಮುಸ್ಲಿಂ ಸಮುದಾಯದ ಜನಾಂಗವನ್ನು ಒಗ್ಗೂಡಿಸಲು ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರೋದು ಶ್ಲಾಘನೀಯ ಎಂದರು. ಕ್ರೀಡಾಕೂಟವನ್ನು ಆಯೋಜಿಸುವುದು ಮುಖ್ಯವಲ್ಲ ಆದರೆ ಅದನ್ನು ಕೊನೆಯವರೆಗೆ ಶಿಸ್ತಿನಿಂದ ಮುನ್ನಡೆಸುವುದು ಬಹಳ ಮುಖ್ಯ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರೀಡಾಕೂಟ ಮುನ್ನಡೆಯಲಿ ಎಂದು ಶುಭಹಾರೈಸಿದರು.
ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಶಿವಣ್ಣ ಮಾತನಾಡಿ, ಕ್ರೀಡೆ ಎಂಬುದು ಮನುಷ್ಯ ಜೀವನದ ಒಂದು ಭಾಗ. ಕ್ರೀಡೆಯಿಂದ ಮನುಷ್ಯ ಸದೃಢರಾಗಬಹುದು, ಕ್ರೀಡೆಯಲ್ಲಿ ಯಾವುದೇ ಧರ್ಮವನ್ನು ಕಾಣಲು ಸಾಧ್ಯವಿಲ್ಲ, ಕ್ರೀಡೆಯಲ್ಲಿ ಸೋತಾಗ ಕುಗ್ಗುವ ಮತ್ತು ಗೆದ್ದಾಗ ಹಿಗ್ಗುವ ಮನೋಭಾವನೆಯನ್ನು ಇಟ್ಟುಕೊಳ್ಳದೆ ಸೋಲೇ ಗೆಲುವಿನ ಮೆಟ್ಟಿಲು ಎಂಬ ಭಾವನೆಯಿಂದ ಕ್ರೀಡೆಯಲ್ಲಿ ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಜಿಲ್ಲಾ ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮಾತನಾಡಿ, ಒಬ್ಬ ಮನುಷ್ಯ ಆರೋಗ್ಯವಾಗಿರಲು ಕ್ರೀಡೆ ಬಹಳ ಮುಖ್ಯ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜ್ಯಾತ್ಯಾತೀತವಾದ ನಮ್ಮ ದೇಶದ ಐಕ್ಯತೆಯನ್ನು ಉಳಿಸಬೇಕಾದರೆ ನಾನು ದೇಶದ ಒಬ್ಬ ಉತ್ತಮ ಪ್ರಜೆ ಎಂಬ ದೃಢ ನಿರ್ಧಾರ ನಮಗೇಬೇಕು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಿಷಯದಲ್ಲಿ ಜಾತಿ, ಧರ್ಮವನ್ನು ಎತ್ತಿಕಟ್ಟುವ ಸನ್ನಿವೇಶ ಉದ್ಭವವಾಗಿದೆ. ಆದರೆ ಇದನ್ನು ಕ್ರೀಡೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಕರ್ನಾಟಕ ಪಬ್ಲಿಕ್ ಶಾಲೆಯ ಉಪಾಧ್ಯಕ್ಷ ಕೆ.ಎ.ಹ್ಯಾರಿಸ್, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಹಾರಿಸ್ ಕೊಳಕೇರಿ, ಪ್ರಸ್ತಾವಿಕವಾಗಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಕ್ರೀಡಾಕೂಟದ ಧ್ವಜಾರೋಹಣವನ್ನು ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ರಶೀದ್ ಎಡಪಾಲ ನೆರವೇರಿಸಿದರು.
ಪಂದ್ಯಾವಳಿಯಲ್ಲಿ ಸುಮಾರು 92 ತಂಡಗಳು ಭಾಗವಹಿಸಲಿದ್ದು,ಪಂದ್ಯಾವಳಿಯು ಮಾ.4 ರಿಂದ 12ರವರೆಗೆ ನಡೆಯಲಿದೆ.
ಈ ಸಂದರ್ಭ ಓಯಸಿಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಾಫಿ ಕೊಟ್ಟಮುಡಿ, ಕಾರ್ಯದರ್ಶಿ ಶಿಹಾಬುದ್ದೀನ್, ಅಶ್ರಫ್ ತಕ್ಕಪಳ್ಳಿ, ರೆಹಮಾನ್, ಸು ಹೈಲ್,ಪ್ರಮುಖರಾದ ರಜಾಕ್ ಎಡಪಾಲ, ಹಾರಿಸ್ ಲಾರ ಮಡಿಕೇರಿ, ಮುಜೀಬ್ ಮೂರ್ನಾಡ್, ನಿರ್ಮಲ್ ಫುಡ್ ಪ್ರಾಡಕ್ಟ್ ಎಂಡಿ ಮಧು, ಓಯಸಿಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು ಮತ್ತಿತರ ಪ್ರಮುಖರು ಹಾಗೂ ಜಿಲ್ಲೆಯ ವಿವಿಧ ತಂಡಗಳ ನಾಯಕರು,ಸದಸ್ಯರು ಮತ್ತಿತರರು ಹಾಜರಿದ್ದರು.
ವರದಿ :ಝಕರಿಯ ನಾಪೋಕ್ಲು
