Advertisement
1:34 AM Thursday 7-December 2023

ಸೋಮವಾರಪೇಟೆಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ : 8 ತಂಡಗಳು ಕ್ವಾಟರ್ ಫೈನಲ್ ಗೆ ಪ್ರವೇಶ

06/03/2023

ಸೋಮವಾರಪೇಟೆ ಮಾ.6 : ಒಕ್ಕಲಿಗರ ಯುವ ವೇದಿಕೆ ಸೋಮವಾರಪೇಟೆs, ಅಮೇಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ, ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಕ್ಕಲಿಗರ ಕಪ್-2023 ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ 8 ತಂಡಗಳು  ಕ್ವಾಟರ್ ಫೈನಲ್ ಗೆ ತಲುಪಿದೆ.
ಬ್ಯಾಂಕ್ ಆಫ್ ಬರೋಡ ತಂಡ ಮುಂಬೈ ಯುವ ಪಲ್ಟನ್ ತಂಡದ ವಿರುದ್ಧ ಸೆಣಸಲಿದೆ. ಕೆ.ಎಸ್.ಪಿ ಮತ್ತು ಕರ್ನಾಟಕ 11, ಸೌತ್‍ಸೆಂಟ್ರಲ್ ರೈಲ್ವೆ ಮತ್ತು ಎರ್ ಇಂಡಿಯಾ, ಹರ್ಯಾಣ ಎನ್‍ಯುಎಸ್‍ಸಿ ಮತ್ತು ತಮಿಳುನಾಡಿನ ದೊರೈಸಿಗಂ ತಂಡಗಳ ನಡುವೆ ಕ್ಯಾಟರ್ ಫೈನಲ್ ನಡೆಯಲಿದೆ.
4ನೇ ವರ್ಷದ ಪಂದ್ಯಾವಳಿ ಸಾವಿರಾರು ಕಬಡ್ಡಿ ಪ್ರೇಮಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಗ್ರಾಮೀಣ ಭಾಗದಿಂದ ಮಹಿಳೆಯರಾದಿಯಾಗಿ ಸಾವಿರಾರು ಮಂದಿ ಗ್ಯಾಲರಿಯಲ್ಲಿ ಕುಳಿತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಆಟವನ್ನು ಕಣ್ತುಂಬಿಕೊಂಡರು.
ಪ್ರೊ ಕಬಡ್ಡಿಯ ಪ್ರತಿಭಾನ್ವಿತ ಆಟಗಾರರಾದ ಸಿದ್ದಾರ್ಥ್ ದೇಸಾಯಿ, ಪ್ರಶಾಂತ್ ರೈ, ಸುಖೇಶ್ ಹೆಗಡೆ, ಸಚಿನ್ ವಿಠಲ್, ರಕ್ಷಿತ್ ಪೂಜಾರಿ, ಸಂತೋಷ್, ರಂಜಿತ್ ನಾಯಕ್, ಮನೋಜ್, ದೀಪಕ್, ಅಭಿಷೇಕ್ ನಟರಾಜನ್, ಹರೀಶ್ ನಾಯಕ್, ಪಲ್ಲೆ ಮಲ್ಲಿಕಾರ್ಜುನ್, ನರೇಂದರ್ ಕುಮಾರ್, ಆಶುಸಿಂಗ್, ಮಣಿಕಂಠನ್ ಅವರುಗಳ ಅದ್ಬುತ ಆಟಕ್ಕೆ ಕಬಡ್ಡಿ ಪ್ರೇಮಿಗಳು ಮನಸೋತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹನುಮಂತೇಗೌಡ, ದ್ಯಾನ್‍ಚಂದ್ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕøತ ಅಂತಾರಾಷ್ಟೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್, ಅಂತಾರಾಷ್ಟ್ರೀಯ ಆಟಗಾರ ಹಾಗೂ ಕೋಚ್ ಜಗದೀಶ್ ಕಾಂಬಳೆ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿ ರಂಜಿತಾ, ಅಂತಾರಾಷ್ಟೀಯ ಹಾಕಿ ಆಟಗಾರ ವಿಕ್ರಾಂತ್, ಪ್ರೊ ಕಬಡ್ಡಿ ವೀಕ್ಷಕ ವಿವರಣೆಗಾರ ಶೇಖರ್‍ಮೂರ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಬಡ್ಡಿ ಹಬ್ಬಕ್ಕೆ ಮೆರಗು ತಂದರು.
ದಾನಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಷಣ್ಮುಗಂ, ಬೆಂಗಳೂರು ನಗರ ಅಧ್ಯಕ್ಷ ಶಿವಲಿಂಗಪ್ಪ, ಸಂಚಾಲಕ ಶ್ರೀಧರ್ ನಾಯಕ್ ಅವರ ತಂಡ ಹಾಗೂ ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರರಾದ ಎ.ಎಂ.ಆನಂದ್, ಪ್ರವೀಣ್, ಆದರ್ಶ್, ಅಭಿಷೇಕ್, ಅಮೃತ್, ಮೋಹನ್, ನಿತಿನ್, ಜಿ.ಎಸ್.ಶೈಲಾ, ಬಿ.ಜಿ.ರಾಗಿಣಿ ತೀರ್ಪುಗಾರ ಕಾರ್ಯನಿರ್ವಹಿಸಿದರು.
ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ. ಸುರೇಶ್, ಮಾಜಿ ಅಧ್ಯಕ್ಷ ಬಿ.ಜೆ.ದೀಪಕ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ದಾನಿಗಳಾದ ಕಾಮನಳ್ಳಿ ಬೆಳ್ಳಿಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಮತ್ತಿತರ ಗಣ್ಯರು ಭಾಗವಹಿಸಿದ್ದರು.
10 ಸಾವಿರ ಮಂದಿ ಕುಳಿತು ಪಂದ್ಯಾವಳಿ ವೀಕ್ಷಿಸಲು ಗ್ಯಾಲರಿ ಆಳವಡಿಸಲಾಗಿದೆ. ಬೆಳಕಿನ ವ್ಯವಸ್ಥೆಯಿರುವ ಎರಡು ಕೋರ್ಟ್‍ಗಳಲ್ಲಿ ಪಂದ್ಯಾವಳಿಗಳು ನಡೆಯುತ್ತಿವೆ. 16 ತಂಡಗಳು ಲೀಗ್ ಮಾದರಿಯಲ್ಲಿ ಆಟವಾಡಿದರು. ಮೈದಾನದಲ್ಲೇ ಮಳಿಗೆಗಳನ್ನು ತೆರೆಯಲಾಗಿದ್ದು, ‘ನಾವು ಪ್ರತಿಷ್ಠಾನ’ದ ಗ್ರಾಮೀಣ ಭಾಗದ ಆಟಿಕೆಗಳು ಮತ್ತು ಪರಿಸರ ಮಾಲಿನ್ಯದ ಬಗ್ಗೆ ಹಾಗೂ ಪ್ಲಾಸ್ಟಿಕ್ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಗಮನ ಸೆಳೆಯಿತು.