Advertisement
9:57 AM Sunday 3-December 2023

ಶ್ರದ್ಧಾಭಕ್ತಿಯಿಂದ ಜರುಗಿದ ಮಲೆತಿರಿಕೆ ಮುತ್ತಪ್ಪನ್ ಕಾವ್ ವಾರ್ಷಿಕ ತೆರೆ ಮಹೋತ್ಸವ

06/03/2023

ವಿರಾಜಪೇಟೆ ಮಾ.6 : ಮಲೆತಿರಿಕೆ ಬೆಟ್ಟದ ಶ್ರೀ ಮುತ್ತಪ್ಪನ್ ಕಾವ್ ದೇವಾಲಯದ 2ನೇ ವಾರ್ಷಿಕ ತೆರೆ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.

ಮಾ.4 ರಂದು ಆರಂಭವಾದ ತೆರೆ ಮಹೋತ್ಸವದಲ್ಲಿ ಮುಂಜಾನೆ ಗಣಪತಿ ಹೋಮ, ಸಂಜೆ ಶ್ರೀ ಮುತ್ತಪ್ಪನ್ ಮಲೆ ಎರಕ್ಕಂ, ಗುಳಿಗನ್ ವೆಳ್ಳಾಟಂ, ಮುತ್ತಪ್ಪನ್ ದೇವರ ವೆಳ್ಳಾಟಂ ಜರುಗಿತು. ನಂತರ ತೆಲುಗರ ಬೀದಿ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದಿಂದ ಮುತ್ತಪ್ಪನ್ ಕಾವ್ ದೇಗುಲದ ವರೆಗೆ ದೀಪಾರಾಧನೆಯ ಮೆರೆವಣಿಗೆ ನೆಡೆಯಿತು.

ವಸೂರಿಮಾಲ ದೇವರ ಕೋಲವು ಡೆಂಟಲ್ ಕಾಲೇಜು ಬಳಿಯ ನೀರು ಕೊಲ್ಲಿಯಿಂದ ಹೊರಟು ದೇಗುಲ ಪ್ರವೇಶ ಮಾಡಿತು, ರಾತ್ರಿ ಪೊಟ್ಟನ್ ದೇವರ ಕೂಟ್ ಪಾಟು ಪ್ರಾರಂಭಗೊಂಡು ಅಂತ್ಯ ಕಂಡಿತ್ತು. ರಾತ್ರಿ 11 ವಿಷ್ಣುಮೂರ್ತಿ ದೇವರ ತೋಟ್ಟಂ ಪಾಟು, ಮಧ್ಯರಾತ್ರಿ ಗುಳಿಗನ್ ದೈವದ ತೆರೆ ನಡೆಯಿತು.

ಮರುದಿನ ಬೆಳಿಗ್ಗೆ ಪೊಟ್ಟನ್ ದೇವರ ಪ್ರವೇಶ ನಡೆದು ಸಂಜೆ ಅಗ್ನಿಪ್ರವೇಶವಾಯಿತು. ರಾತ್ರಿ ವಸೂರಿಮಾಲ ದೇವರ ತೆರೆ, ವಿಷ್ಣುಮೂರ್ತಿ ದೇವರ ತೆರೆ, ವಸೂರಿಮಾಲ ಕುರುತಿ ಪೂಜೆ, ಪೊಟ್ಟನ್ ದೇವರ ಕುಟ್ಟಿ ಊಟ್, ತೆರೆ ಮಹೋತ್ಸವ ಕೊನೆಘಟ್ಟವಾಗಿ ವಿಷ್ಣುಮೂರ್ತಿ ದೇವರ ಭಾರಣಿಯೊಂದಿಗೆ ಕೊನೆಗೊಂಡಿತು.

ತೆರೆ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ದೇವಲಾಯದ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ದೇವಲಾಯದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಸ್ಥಳೀಯ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವರದಿ : ಕಿಶೋರ್ ಕುಮಾರ್ ಶೆಟ್ಟಿ