ಸೂರಿಗಾಗಿ ಸಮರ: ಮಾ.9ರಂದು ವಿಧಾನಸೌಧ ಮುತ್ತಿಗೆ

ಮಡಿಕೇರಿ ಮಾ.6 : ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಮಾ.9 ರಂದು ಎಐಟಿಯುಸಿ ಮತ್ತು ಸಿಪಿಐ ನೇತೃತ್ವದಲ್ಲಿ “ಸೂರಿಗಾಗಿ ಸಮರ” ವಿಧಾನಸೌಧ ಚಲೋ ಬೃಹತ್ ಪ್ರತಿಭಟನೆಗೆ ಕೊಡಗಿನಿಂದಲೂ ಬೆಂಬಲ ಸೂಚಿಸಲಾಗಿವುದು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, 50 ಲಕ್ಷ ಕುಟುಂಬಗಳ ನಿವೇಶನ ಮತ್ತು ವಸತಿಗಾಗಿ 5 ಲಕ್ಷ ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಫೆ.26 ರಂದು ಸಿರಾ ತಾಲೂಕಿನ ತಲಗುಂದು ಗ್ರಾಮದಲ್ಲಿ ಕಾಲ್ನಡಿಗೆ ಜಾಥ ಪ್ರಾರಂಭವಾಗಿದ್ದು, ಮಾ.9 ರಂದು ಬೆಂಗಳೂರಿಗೆ ತಲುಪಲಿದೆ. ಅಂದು ಕೊಡಗಿನಿಂದ ಸುಮಾರು 200 ರಿಂದ 300 ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ನಿವೇಶನಕ್ಕಾಗಿ ಆಗ್ರಹಿಸಿ 2020ರಲ್ಲಿ ಕೋಟಿ ಹೆಜ್ಜೆಯೊಂದಿಗೆ ಬಳ್ಳಾರಿಯಿಂದ ಕಾಲ್ನಾಡಿಗೆ ಜಾಥ ಆರಂಭವಾಗಿತ್ತು. ಆದರೆ ಕೋವಿಡ್ ಹೆಚ್ಚಾದ ಕಾರಣ ಜಾಥವನ್ನು ಮುಂದೂಡಲ್ಪಟ್ಟಿತ್ತು. ನಂತರ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಿಂದ ಜಾಥ ಪ್ರಾರಂಭಗೊಂಡು ಕೊಡಗು ಜಿಲ್ಲೆಯ ನಾನಾ ಗ್ರಾ.ಪಂ ಗಳಿಗೆ ತೆರಳಿ ನಿವೇಶನದ ಅರ್ಜಿಯನ್ನು ನೀಡಲಾಯಿತು.
ಅಲ್ಲದೆ ಕೊನೆಯ ನಾಲ್ಕನೇ ದಿನ ಮಡಿಕೇರಿಯ ಜಿಲ್ಲಾ ಅಧೀಕ್ಷಕರಿಗೆ ಮನವಿಯನ್ನು ನೀಡಲಾಗಿತ್ತು. ವರ್ಷಗಳು ಕಳೆದರೂ ನಮ್ಮ ಮನವಿಗೆ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಆರೋಪಿಸಿದರು.
ಅನೇಕ ವರ್ಷಗಳಿಂದ ಕೃಷಿ ಕಾರ್ಮಿಕರು ಸ್ವಂತ ನಿವೇಶನ ಮತ್ತು ಮನೆ ಇಲ್ಲದೆ. ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ತಕ್ಷಣವೇ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಂತೆ ಹೆಚ್.ಎಂ.ಸೋಮಪ್ಪ ಒತ್ತಾಯಿಸಿದರು.
