Advertisement
9:33 AM Sunday 3-December 2023

ನಾಪೋಕ್ಲುವಿನಲ್ಲಿ ರಕ್ತದಾನ ಶಿಬಿರ :  ರಕ್ತದಾನದಿಂದ ಆರೋಗ್ಯದ ಸಮತೋಲನ ಸಾಧ್ಯ : ಎಂ.ಎಸ್.ಶಿವಣ್ಣ

06/03/2023

ನಾಪೋಕ್ಲು ಮಾ.6 :  ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಹಾಗೂ ಸಂಪಾಜೆ ಸ್ಥಳೀಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ರಕ್ತನಿಧಿ ಕೇಂದ್ರ, ರಾಷ್ಟ್ರೀಯ ಸ್ವಯಂಸೇವಾ ಯೋಜನೆ, ನಾಪೋಕ್ಲು ಕೆ.ಪಿ.ಎಸ್ ಪ್ರೌಢಶಾಲೆ, ಬೇತು ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ, ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಹಯೋಗದೊಂದಿಗೆ ನಡೆದ ಶಿಬಿರವನ್ನು ನಾಪೋಕ್ಲು ಕೆ.ಪಿ.ಎಲ್ ಪ್ರೌಢಶಾಲೆಯ ಪ್ರಭಾರ ಉಪ ಪ್ರಾಂಶುಪಾಲ ಎಂ.ಎಸ್.ಶಿವಣ್ಣ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,  ನಮ್ಮ ದೇಶ , ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಅಪಘಾತಗಳಿಂದ ಹಾಗೂ ಇನ್ನಿತರ ತುರ್ತು ಆರೋಗ್ಯ ಸಮಸ್ಯೆಗಳಿಂದ ಜನರಿಗೆ ರಕ್ತಗಳು ಸಿಗದೇ ಪ್ರಾಣ ಕಳೆದುಕೊಳ್ಳುವ ಸನ್ನಿವೇಶಗಳನ್ನು ತಡೆಗಟ್ಟಲು ಇಂತಹ ಸಂಸ್ಥೆಗಳು ರಕ್ತವನ್ನು ಶೇಖರಿಸಿಕೊಂಡು ಹಲವಾರು ಜೀವಗಳನ್ನು ಉಳಿಸುವ ಪ್ರಯತ್ನ ಶ್ಲಾಘನೀಯ ಎಂದರು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ರಕ್ತವನ್ನು ದಾನಮಾಡಿ ಇಂತಹ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.

ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನದ ಮಹತ್ವ ಪ್ರಯೋಜನ ಮತ್ತು ಸಾರ್ಥಕ ಮನೋಭಾವದ ಬಗ್ಗೆ ಅರಿವು ನೀಡಿದರು.  ಮಕ್ಕಳು ವಿದ್ಯಾರ್ಥಿ ಜೀವನದಿಂದಲೇ ರಕ್ತದಾನದ ಬಗ್ಗೆ ಅರಿತುಕೊಳ್ಳಬೇಕು. ಜೀವನದಲ್ಲಿ ಅವಕಾಶಗಳು ಸಿಕ್ಕಾಗ ರಕ್ತದಾನ ಮಾಡಲು ಮುಂದೆ ಬರಬೇಕೆಂದರು. ಪ್ರತಿಯೊಬ್ಬರು 6 ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಬಹುದು, ಗ್ರಾಮೀಣ ಮಟ್ಟದಲ್ಲಿ ಸಂಘ ಸಂಸ್ಥೆಗಳು ಕೈಜೋಡಿಸಿ ಇಂತಹ ಶಿಬಿರವನ್ನು ಆಯೋಜಿಸುವುದರಿಂದ ಸಹಕಾರಿ ಅದರಂತೆ ವಿದ್ಯಾರ್ಥಿಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲು ಉಪಯೋಗವಾಗಲಿದೆ ಎಂದ ಅವರು, ನಾವು ನೀಡುವ ರಕ್ತ ಒಂದು ಜೀವದ ಉಳಿವಿಗೆ ಸಹಕರಿಯಾಗುತ್ತದೆ. ರಕ್ತದಾನ ಮಾಡುವ ಬಗ್ಗೆ ಇರುವ ಮೂಢನಂಬಿಕೆಯಿಂದ ಜನರು ದೂರ ಇರಬೇಕೆಂದು ಕಿವಿಮಾತು ಹೇಳಿದರು.

ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಎ.ಹಾರಿಸ್ ಮಾತನಾಡಿ, ನಾನು ಹಲವು ಬಾರಿ ರಕ್ತವನ್ನು ದಾನ ಮಾಡಿದ್ದೇನೆ. ಇದರಿಂದ ನನ್ನ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಆದ್ದರಿಂದ ಎಲ್ಲರೂ ರಕ್ತದಾನ ಮಾಡಿ ಇನ್ನೊಂದು ಜೀವದ ಉಳಿವಿಗಾಗಿ ಸಹಕರಿಸಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರದಲ್ಲಿ 33 ಯೂನಿಟ್ ರಕ್ತವನ್ನು ಸಂಗ್ರಹಿಸಿ ರಕ್ತ ನಿಧಿಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.

ಈ ಸಂದರ್ಭ ಆಯುಷ್ಮಾನ್ ಇಲಾಖೆಯ ಜಿಲ್ಲಾ ಸಂಯೋಜಕ ದಿಲೀಪ್, ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆಯ ಅಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಉಪಾಧ್ಯಕ್ಷ ಮಿಟ್ಟು ಸೋಮಯ್ಯ, ಶೌರ್ಯ ಘಟಕದ ಸಂಯೋಜಕಿ ಬಾಳೆಯಡ ದಿವ್ಯಾಮಂದಪ್ಪ, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶೌರ್ಯ ಮತ್ತು ಸೇವಾ ಕಾರ್ಯಪಡೆ ಸಂಘದ ಪದಾಧಿಕಾರಿಗಳು, ಶಾಲೆಯ ಶಿಕ್ಷಕ ವೃಂದದವರು, ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ರಕ್ತ ದಾನಿಗಳು ಮತ್ತಿತರರು  ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸಂಸ್ಥೆಯ ಅಧ್ಯಕ್ಷ ಎಂ.ಧನಂಜಯ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.  ಕರ್ನಾಟಕ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಬಿ ಉಷಾರಾಣಿ ನಿರೂಪಿಸಿ ವಂದಿಸಿದರು.

ವರದಿ :ಝಕರಿಯ ನಾಪೋಕ್ಲು