ಕಾಡು ಹಣ್ಣುಗಳ ಸಂರಕ್ಷಣೆ ಮತ್ತು ಅಧ್ಯಯನಕ್ಕೆ ಕ್ರಮ : ನಾಪಂಡ ರವಿ ಕಾಳಪ್ಪ

ಮಡಿಕೇರಿ ಮಾ.6 : ಕಾಡು ಹಣ್ಣುಗಳು ಅಳಿವಿನಂಚಿಗೆ ಬಂದಿರುವುದು ಬಹಳ ಆತಂಕಕಾರಿ ಬೆಳವಣಿಗೆ. ಕೊಡಗಿನಲ್ಲಿ ಮರೆಯಾಗುತ್ತಿರುವ ಅಪರೂಪದ ಕಾಡುಹಣ್ಣುಗಳನ್ನು ಬೆಳೆದು ಸಂರಕ್ಷಿಸಲು ಆಸಕ್ತಿ ವಹಿಸಬೇಕಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎನ್.ಎಂ. ರವಿ ಕಾಳಪ್ಪ ಮನವಿ ಮಾಡಿದರು.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವು ವರ್ಷಗಳ ಹಿಂದೆ ಕೊಡಗಿನ ಕಾಡು ಮೇಡುಗಳ ಬಗ್ಗೆ ಜನರಿಗೆ ವಿಶೇಷ ಸೆಳೆತ, ಆಸಕ್ತಿ ಇತ್ತು. ಬೇಸಿಗೆಕಾಲ ಮಳೆಗಾಲ, ಚಳಿಗಾಲ ಹೀಗೆ ವಿವಿಧ ಸಮಯದಲ್ಲಿ ಕಾಡಿನತ್ತ ನಾವು ಹೆಜ್ಜೆ ಹಾಕುತ್ತಿದ್ದೆವು. ಕಾಡಿನ ಪರಿಸರ ಮನಸ್ಸನ್ನು ಉಲ್ಲಸಿತವಾಗಿಸುವ ಜತೆಗೆ ಅಲ್ಲಿ ಸಿಗುತ್ತಿದ್ದ ಬಗೆಬಗೆಯ, ರುಚಿ ರುಚಿಯಾದ ಹಣ್ಣುಗಳು ಕಾಡಿನತ್ತ ನಾವು ಹೆಚ್ಚಾಗಿ ಹೋಗುವುದಕ್ಕೆ ಮುಖ್ಯ ಕಾರಣವಾಗಿತ್ತು. ನಮ್ಮ ಆರೋಗ್ಯ ವೃದ್ಧಿಗೂ ಕಾಡುಹಣ್ಣುಗಳು ಬಹು ದೊಡ್ಡ ಕೊಡುಗೆ ನೀಡುತ್ತಿದ್ದವು. ಆದರೆ ಬದಲಾಗುತ್ತಿರುವ ದಿನಮಾನದಲ್ಲಿ ಕಾಡಿನೆಡೆಗೆ ಹೋಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜತೆಗೆ ಕಾಡು ಹಣ್ಣುಗಳ ಬಗೆಗಿದ್ದ ಆಸಕ್ತಿ ಇಂದಿನ ತಲೆಮಾರಿನಲ್ಲಿ ಕಾಣುತ್ತಿಲ್ಲ. ವಿಪರ್ಯಾಸ ಎಂದರೆ ಕೊಡಗಿನಲ್ಲಿ ಸಿಗುತ್ತಿದ್ದ ಅದೇಷ್ಟೋ ಬಗೆಯ ಕಾಡು ಹಣ್ಣುಗಳು ಇಂದು ಅಳಿವಿನಂಚಿಗೆ ಬಂದು ನಿಂತಿದೆ. ಇದಕ್ಕೆ ಕಾರಣಗಳು ಅನೇಕ.
ಅವುಗಳನ್ನು ಸಂರಕ್ಷಣೆ ಮಾಡುವ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ ಪೋಷಿಸುವ ಅನಿವಾರ್ಯತೆ ಬಂದೊದಗಿದೆ. ಅಂಥವುಗಳನ್ನು ಗುರುತಿಸಿ, ಅವುಗಳ ಬಗ್ಗೆ ಅಧ್ಯಯನ ಮಾಡಲು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮುಂದಾಗಿದೆ. ಅದರ ಭಾಗವಾಗಿ ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಸತೀಶ್ ಅವರಿಗೆ ಜವಾಬ್ದಾರಿ ವಹಿಸಲಾಗಿದ್ದು, ಅವರು ಕಾರ್ಯವನ್ನು ಕೈಗೆತ್ತಿಕೊಂಡು ಈಗಾಗಲೆ ಅಧ್ಯಯನ ನಡೆಸಿದ್ದಾರೆ. ಇವರಿಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಪೋತ್ಸಾಹ ನೀಡಿದ್ದು, ಅನೇಕ ಬಗೆಯ ಕಾಡು ಹಣ್ಣುಗಳನ್ನು ಬೆಳೆಯಲು ಇವರು ಸಸಿ ಮಡಿಗಳನ್ನು ಸಹ ಮಾಡಿ, ರೈತರಿಗೆ ವಿತರಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಹಾಗೂ ಈ ಹಣ್ಣಿನಲ್ಲಿರುವ ಗುಣಲಕ್ಷಣಗಳು, ಔಷಧೀಯ ಗುಣಗಳು ಹಾಗೂ ಅವುಗಳಲ್ಲಿರುವ ಪೌಷ್ಠಿಕಾಂಶಗಳ ಬಗ್ಗೆಯೂ ಅಧ್ಯಯನ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇವರು ಮಾಡಿರುವ ಅಧ್ಯಯನದ ಲಾಭವನ್ನು ಜಿಲ್ಲೆಯ ರೈತರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಓಂಕಾರೇಶ್ವರ ಜೀವವೈವಿಧ್ಯ ತಾಣ : : ಕೊಡಗು ಜಿಲ್ಲೆಯ ಉದ್ದಗಲಕ್ಕೂ ಸಾವಿರಾರು ಜೀವವೈವಿಧ್ಯ ಪ್ರದೇಶಗಳಿವೆ. ಅವುಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜಿನ ಮೂಲವಾಗಿರುವ ಕೆ.ನಿಡುಗಣೆ ಗ್ರಾಮದ ಕೂಟುಪೊಳೆ ಜಲ ಸಂಗ್ರಹಾಗಾರದ ಮೆಲ್ಭಾಗ ಇರುವ ಅರಣ್ಯ ಪ್ರದೇಶ ಕೂಡಾ ಒಂದು. ಇಲ್ಲಿನ ಸರ್ವೆ ನಂಬರ್ 9/1ರ 27.08 ಎಕ್ರೆ ಪ್ರದೇಶದಲ್ಲಿ ಉತ್ತಮ ಅರಣ್ಯ, ಸಾಕಷ್ಟು ಬಗೆಯ ಅಪರೂಪದ ಜೀವ ವೈವಿಧ್ಯ, ಜಲಚರಗಳು, ಅಮೂಲ್ಯ ಗಿಡಮೂಲಿಕೆಗಳಿವೆ. ಈ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನೋಡಿಕೊಂಡು ರಕ್ಷಣೆ ಮಾಡುವ ಜತೆಗೆ ಸಂರಕ್ಷಣೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಕಾರ್ಯಕ್ರಮ ರೂಪಿಸಲು ಮುಂದಾಗಿದೆ.
ಈ ವಿಚಾರವನ್ನು ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಅದರ ಫಲಿತಾಂಶವಾಗಿ ಈ ಸ್ಥಳವನ್ನು ‘ಓಂಕಾರೇಶ್ವರ ಜೀವವೈವಿಧ್ಯ ರಕ್ಷಿತ ತಾಣ’ ಎಂಬುದಾಗಿ ಘೋಷಿಸಲು ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ.
ಸದ್ಯ ಮಡಿಕೇರಿ ನಗರ ತನ್ನ ವ್ಯಾಪ್ತಿಯನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ನಗರೀಕರಣ ಮತ್ತಷ್ಟು ವಿಸ್ತರಣೆಯಾದಾಗ ಈ ಅತ್ಯಮೂಲ್ಯ ಪ್ರದೇಶಕ್ಕೆ ಯಾವುದೇ ರೀತಿಯ ಧಕ್ಕೆಯಾಗಬಾರದೆಂಬ ದೂರಾಲೋಚನೆಯನ್ನೂ ಮಂಡಳಿ ಹೊಂದಿದೆ. ಹೀಗಾಗಿ ಈಗಿನಿಂದಲೇ ಇದಕ್ಕೆ ಬೇಕಾದ ಚಿಂತನೆಯನ್ನು ಮಂಡಳಿ ಹರಿಸಿದೆ. ಶಾಸಕರ ಮಾರ್ಗದರ್ಶನದೊಂದಿಗೆ ಕೊಡಗು ಜಿಲ್ಲಾಡಳಿತದ ಜತೆ ಸೇರಿಕೊಂಡು ಮುಂದಿನ ದಿನದಲ್ಲಿ ವಿಶೇಷ ಜೀವ ವೈವಿಧ್ಯ ಸಂಪತ್ತಿನ ಆಗರವಾಗಿರುವ ಈ ಜಾಗದ ಸಂರಕ್ಷಣೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
