Advertisement
1:13 PM Monday 4-December 2023

ಸೋಮವಾರಪೇಟೆಯಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ : ಹೈದರಾಬಾದ್‍ನ ಸೌತ್‍ಸೆಂಟ್ರಲ್ ರೈಲ್ವೆ ತಂಡಕ್ಕೆ ಒಕ್ಕಲಿಗರ ಕಪ್

06/03/2023

ಸೋಮವಾರಪೇಟೆ ಮಾ.6 : ಒಕ್ಕಲಿಗರ ಯುವ ವೇದಿಕೆ ಸೋಮವಾರಪೇಟೆ, ಅಮೇಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಮತ್ತು ಕೊಡಗು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯ ಪ್ರತಿಷ್ಠಿತ ಒಕ್ಕಲಿಗರ ಕಪ್‍ನ್ನು ಹೈದರಾಬಾದ್‍ನ ಸೌತ್‍ಸೆಂಟ್ರಲ್ ರೈಲ್ವೆ ತಂಡ ಮುಡಿಗೇರಿಸಿಕೊಂಡಿತು.
ಕರ್ನಾಟಕ ಇಲೆವೆನ್ ತಂಡ ರನ್ನರ್ ಆಫ್ ಆಯಿತು. ರಾತ್ರಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ 44-30 ಅಂಕಗಳಲ್ಲಿ ಗೆಲುವು ಸಾಧಿಸಿದ ತಂಡ 2ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಪಡೆಯಿತು.
ಕರ್ನಾಟಕ ತಂಡ 1ಲಕ್ಷ ರೂ. ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಮೂರನೇ ಬಹುಮಾನವನ್ನು ಮುಂಬೈ ಯುವ ಪಲ್ಟನ್, ಚತುರ್ಥ ಬಹುಮಾನವನ್ನು ಹರ್ಯಾಣ ತಂಡ ಪಡೆಯಿತು.
ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡವನ್ನು, ಮುಂಬೈನ ಯುವ ಪಲ್ಟನ್ ತಂಡ 36-32 ಅಂಕಗಳಿಂದ ಸೋಲಿಸಿ ಸೆಮಿಫೈನಲ್‍ಗೇರಿತು. ಸೌತ್‍ಸೆಂಟ್ರಲ್ ರೈಲ್ವೆ ತಂಡ, ಏರ್‍ಇಂಡಿಯಾ ತಂಡದ ವಿರುದ್ಧ 38-16ರಲ್ಲಿ ಗೆಲುವು ದಾಖಲಿಸಿತು. ಹರ್ಯಾಣ ಎನ್‍ಯುಎಸ್‍ಸಿ ತಂಡ, ತಮಿಳುನಾಡಿನ ದೊರೆ ಸಿಗಂ ತಂಡವನ್ನು 42-35 ಅಂಕಗಳಿಂದ ಮಣಿಸಿತು. ಕರ್ನಾಟಕ ಇಲೆವೆನ್ ತಂಡ, ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು 34-25 ಅಂಕಗಳಿಂದ ಸೋಲಿಸಿತು.
ಮೊದಲ ಸೆಮಿಫೈನಲ್‍ನಲ್ಲಿ ಕರ್ನಾಟಕ ಇಲೆವೆನ್ ತಂಡ, ಮುಂಬೈ ಯುವ ಪಲ್ಟನ್ ತಂಡವನ್ನು 30-29 ಅಂಕಗಳಿಂದ ಸೋಲಿಸಿ ಫೈನಲ್‍ಗೇರಿತು. ಎರಡನೇ ಸೇಮಿಸ್‍ನಲ್ಲಿ ಹರ್ಯಾಣ ಎನ್‍ಯುಎಸ್‍ಸಿ ತಂಡವನ್ನು ಸೌತ್‍ಸೆಂಟ್ರಲ್ ರೈಲ್ವೆ ತಂಡ 38-19 ಸೋಲಿಸಿತು ಫೈನಲ್ ಗೇರಿತು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ.ಜೀವಿಜಯ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್, ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಸಿ.ಸುರೇಶ್, ಜಿಲ್ಲಾ ಅಧ್ಯಕ್ಷ ಎಚ್.ಎಸ್.ಉತ್ತಪ್ಪ ಪ್ರಮುಖರಾದ ಡಾ.ಮಂತರ್‍ಗೌಡ, ಹರೀಶ್‍ಗೌಡ, ಎಸ್.ಜಿ.ಮೇದಪ್ಪ, ಬಿ.ಜೆ.ದೀಪಕ್, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಶುಂಠಿ ನಾಗಭೂಷಣ್, ಕಿರಣ್ ಕೊತ್ನಳ್ಳಿ, ಪಿ.ಕೆ.ರವಿ ಮತ್ತಿತರ ಗಣ್ಯರು ಹಾಜರಿದ್ದರು.
ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಿ.ಸಿ.ಸುರೇಶ್, ಕಿರಿಯ ಹಾಕಿ ಆಟಗಾರ ಹಾನಗಲ್ಲು ಗ್ರಾಮದ ಕೆ.ಸಿ.ಭುವನ್, ಹೆಗ್ಗುಳ ಗ್ರಾಮದ ವಿ.ವೈ.ಶಶಿತ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.