ಸೋಮವಾರಪೇಟೆಯಲ್ಲಿ ಸಾಧನ ಸಮಾವೇಶ : ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿ : ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ ಮಾ.6 : ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಸೋಮವಾರಪೇಟೆ ವಲಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇವುಗಳ ಆಶ್ರಯದಲ್ಲಿ ಸೋಮವಾರ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಮತ್ತು ಸಾಧನ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರೊಂದಿಗೆ ರೈತರಿಗೂ ಕೂಡ ಸಹಾಯ ಮಾಡಲು ಯೋಜನೆ ಮುಂದಾಗಿದ್ದು, ಇತ್ತೀಚೆಗೆ ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ನೀಡುತ್ತಿದೆ. ನಾನೂರು ಕುಟುಂಬಕ್ಕೂ ಹೆಚ್ಚು ಸದಸ್ಯರು ಹೆಚ್ಚು ಸಾಲವನ್ನು ಪಡೆದಿರುವುದು ಸರಿ. ಆದರೆ, ಸಾಲವನ್ನು ಸಕಾಲದಲ್ಲಿ ಹಿಂತಿರುಗಿಸಬೇಕೆಂದು ಮನವಿ ಮಾಡಿದರು. ಗುಂಪಿನ ಸದಸ್ಯರಿಗೆ ಏನಾದರೂ ತೊಂದರೆಯಾದಲ್ಲಿ, ತುರ್ತು ಚಿಕಿತ್ಸೆಗೆ ನೆರವಾಗಲು ಸರ್ಕಾರದ ಮೂಲಕ ಅಂಬುಲೆನ್ಸ್ ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಮಾತನಾಡಿ, ದುಡಿಯುವ ಕೈಗಳಿಗೆ ಶಕ್ತಿಯನ್ನು ನೀಡುವಂತಹ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುವ ಮೂಲಕ, ಸಮಾಜದ ಮುಖ್ಯವಾಹಿನಿಗೆ ಜನ ಸಾಮಾನ್ಯರನ್ನು ತರುವಂತಹ ಕೆಲಸ ಮಾಡುತ್ತಿದೆ. ಅಭಿವೃದ್ಧಿಯ ಪರಿವರ್ತನೆ ಸಹ ಯೋಜನೆ ಕಾರ್ಯಕರ್ತರಿಂದ ನಡೆಯುತ್ತಿದೆ. ಪ್ರತಿಯೊಬ್ಬರಲ್ಲೂ ಸಂಸ್ಕøತಿ ಮತ್ತು ಸಂಸ್ಕಾರಗಳು ಬರಬೇಕು. ಕೃಷಿಯೇತರ ಸ್ವ ಸಹಾಯ ಸಂಘಕ್ಕೆ ರೂ 5 ¯ಕ್ಷಕ್ಕೂ ಹೆಚ್ಚಿನ ಸಾಲ ನೀಡಿದೆ. ನಾಲ್ಕು ಸಾವಿರ ಜನರು 122 ಕೋಟಿಯಷ್ಟು ಹಣವನ್ನು ಸ್ವಾ ಉದ್ಯೋಗಕ್ಕೆ ಪ್ರಯೋಜನ ಪಡೆದುಕೊಂಡಿದ್ದಾರೆ. ನಮ್ಮ ಜೀವನಕ್ಕೆ ಭದ್ರತೆಯಾಗಿರುವ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಎಲ್ಲ ಸದಸ್ಯರು ನೋಂದಾಯಿಸಿಕೊಂಡಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಹೇಳಿದರು.
ತಪೋಕ್ಷೇತ್ರ ಮನೆಹಳ್ಳಿ ಮಠದ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು. ಅಧ್ಯಕ್ಷತೆ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಡಿ.ಕೆ. ಸುಧಾಕರ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕ ಅಧ್ಯಕ್ಷ ಅಭಿಮನ್ಯುಕುಮಾರ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತಿ, ಸದಸ್ಯ ಮಹೇಶ್, ಸುಮಾ ಸುದೀಪ್, ಲೀಲಾ ನಿರ್ವಾಣಿ, ಸೋಮೇಶ್, ಸುರೇಶ್ , ಯೋಜನೆ ಜಿಲ್ಲಾ ನಿರ್ದೇಶಕ ಲೀಲಾವತಿ, ತಾಲ್ಲೂಕು ಯೋಜನಾಧಿಕಾರಿ ರೋಹಿತ್ ಇದ್ದರು.
ಸೋಮವಾರಪೇಟೆಯ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳಿಗೆ ಪ್ರಶಂಸನ ಪತ್ರ ನೀಡಲಾಯಿತು. ಇದೇ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
