Advertisement
1:02 AM Thursday 7-December 2023

ಭ್ರಷ್ಟಾಚಾರದ ವಿರುದ್ಧ ಬಂದ್ ಗೆ ಕರೆ ನೀಡಿದ ಕೊಡಗು ಕಾಂಗ್ರೆಸ್ : ಗ್ರೇಟರ್ ರಾಜಾಸೀಟ್‌ : ಶ್ವೇತಪತ್ರ ಹೊರಡಿಸಲು ಒತ್ತಾಯ

06/03/2023

ಮಡಿಕೇರಿ ಮಾ.6 : ಭ್ರಷ್ಟಾಚಾರ ಮುಕ್ತ ಕರ್ನಾಟಕ ಹೋರಾಟದ ಭಾಗವಾಗಿ ಮಾ.9 ರಂದು ಬೆಳಗ್ಗೆ 9 ಗಂಟೆಯಿoದ 11 ಗಂಟೆಯವರೆಗೆ ಕರ್ನಾಟಕ ಬಂದ್ ಗೆ ಕೆಪಿಸಿಸಿ ಕರೆ ನೀಡಿದೆ. ಕೊಡಗಿನಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಸ್ವಯಂ ಪ್ರೇರಿತ ಬಂದ್ ಮೂಲಕ ಬೆಂಬಲ ಸೂಚಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಬಂದ್ ಗೆ ಕರೆ ನೀಡಿದರು.
ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದoತೆ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲು ಮನವಿ ಮಾಡುತ್ತೇವೆ, ಯಾರ ಮೇಲೂ ಒತ್ತಡ ಹೇರುವುದಿಲ್ಲ. ಪ್ರತಿಭಟನೆ ಅಥವಾ ರಸ್ತೆ ತಡೆ ಮಾಡುವುದಿಲ್ಲ, ರಾಜ್ಯದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದ ವಿರುದ್ಧ ಜನರು ಕೂಡ ಜಾಗೃತರಾಗಿದ್ದು, ಬಂದ್ ಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
::: ಗ್ರೇಟರ್ ರಾಜಾಸೀಟ್‌ನಲ್ಲಿ ದುರುಪಯೋಗ :::
ಸುಮಾರು 4.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ‘ಗ್ರೇಟರ್ ರಾಜಾಸೀಟು’ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆ ಸಹಿತ ಮಾಹಿತಿ ಲಭಿಸಿದೆ ಎಂದು ಆರೋಪಿಸಿರುವ ಧರ್ಮಜ ಉತ್ತಪ್ಪ, ಲೋಕಾಯುಕ್ತಕ್ಕೆ ದೂರು ನೀಡಲಾಗುವುದೆಂದು ತಿಳಿಸಿದರು.
ಯೋಜನೆಯ ಖರ್ಚು ವೆಚ್ಚಗಳ ಕುರಿತು ‘ಶ್ವೇತ ಪತ್ರ’ ಹೊರಡಿಸಲಿ ಎಂದು ಆಗ್ರಹಿಸಿದರು.
ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಕಾಮಗಾರಿ ಸಮರ್ಪಕವಾಗಿಲ್ಲ. ನೀರು ಪೂರೈಕೆಯಾಗದ ಕಾಮಗಾರಿಗೆ ಸಂಬoಧಿಸಿದ ಬಿಲ್ ಪಾವತಿಸಬಾರದು ಎಂದು ಒತ್ತಾಯಿಸಿದರು.
ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ಕಚೇರಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಲೋಕಾಯುಕ್ತ ದಾಳಿಯಿಂದ ಇದು ಬಯಲಾಗಿದ್ದು, ಜನಪ್ರತಿನಿಧಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಸಾಬೀತಾಗಿದೆ. ಶೇ.40 ಕಮಿಷನ್ ಈಗ ಶೇ.60- 70 ಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಿದರು.
::: ‘ಪ್ರಜಾಧ್ವನಿ’ ಯಾತ್ರೆ :::
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು, ಈಗಿನ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾ.12 ಮತ್ತು 13 ರಂದು ಜಿಲ್ಲೆಯಲ್ಲಿ ‘ಪ್ರಜಾಧ್ವನಿ’ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಎರಡು ಕ್ಷೇತ್ರಗಳ ಆರು ಕಡೆಗಳಲ್ಲಿ “ಪ್ರಜಾಧ್ವನಿ” ಕಾರ್ಯಕ್ರಮ ನಡೆಯಲಿದೆ. ಮಾ.12 ರಂದು ಬೆಳಗ್ಗೆ 10.30 ಗಂಟೆಗೆ ಗೋಣಿಕೊಪ್ಪಲು, ಮಧ್ಯಾಹ್ನ 2 ಕ್ಕೆ ಸಿದ್ದಾಪುರ, ಸಂಜೆ 5.30 ಕ್ಕೆ ಕುಶಾಲನಗರದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾ.13 ರಂದು ಬೆ.11 ಗಂಟೆಗೆ ಸೋಮವಾರಪೇಟೆ, ಮಧ್ಯಾಹ್ನ 2 ಗಂಟೆಗೆ ಮಡಿಕೇರಿ ಮತ್ತು ಸಂಜೆ 5 ಗಂಟೆಗೆ ನಾಪೋಕ್ಲುವಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಪಿಸಿಸಿ ಪ್ರಮುಖರಾದ ಬಿ.ಕೆ.ಹರಿಪ್ರಸಾದ್ ಹಾಗೂ ಆರ್.ವಿ.ದೇಶಪಾಂಡೆ ಅವರ ನೇತೃತ್ವದಲ್ಲಿ ಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಕ್ತಾರ ತೆನ್ನಿರ ಮೈನಾ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ ಹಾಗೂ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ.ರಾಜೇಶ್ ಉಪಸ್ಥಿತರಿದ್ದರು.