ಸೋಮವಾರಪೇಟೆಯಲ್ಲಿ ‘ಮಾತೃತ್ವದಿಂದ ಕ್ರಿಯಾತತ್ವ’ ಕಾರ್ಯಕ್ರಮ : ಗಮನ ಸೆಳೆದ ತಾಯಂದಿರ ಪ್ರತಿಭಾ ಪ್ರದರ್ಶನ

ಸೋಮವಾರಪೇಟೆ ಮಾ.7 : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಶಾಲೆಯ ವತಿಯಿಂದ ‘ಮಾತೃತ್ವದಿಂದ ಕ್ರಿಯಾತತ್ವ’ ಹೆಸರಿನಲ್ಲಿ ಮಕ್ಕಳ ತಾಯಂದಿರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಗಮನ ಸೆಳೆಯಿತು.
ಕಳೆದ ನಾಲ್ಕು ದಿನಗಳಿಂದ ಶಾಲಾ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಮ್ಮಂದಿರು ತಮ್ಮ ಮಕ್ಕಳ ಎದುರು ನೃತ್ಯ ಮಾಡಿ ರಂಜಿಸಿದರು.
ಅನೇಕರು ಸಮೂಹ ನೃತ್ಯ, ಭಾವಗೀತೆ, ಭಕ್ತಿ ಗೀತೆ, ಚಿತ್ರಗೀತೆಗಳನ್ನು ಹಾಡಿ ಸಂಭ್ರಮಿಸಿದರು. ತಮ್ಮ ಮಕ್ಕಳು ಕಲಿಯುವ ಶಾಲೆಯಲ್ಲಿ ಅಮ್ಮಂದಿರು ನೃತ್ಯಗಳನ್ನು ಕಲಿತು ನೃತ್ಯ ಮಾಡಿ ಮಕ್ಕಳನ್ನು ರಂಜಿಸಿರುವುದು ವಿಶೇಷವಾಗಿತ್ತು.
ಮಂಗಳವಾರದಂದು ಅಮ್ಮಂದಿರಿಗೆ ಅರಿಶಿನಿ ಕುಂಕುಮ, ಬಾಗಿನ ನೀಡಿ ಗೌರವಿಸಲಾಯಿತು. ಬುಧವಾರ ವಿದ್ಯಾರ್ಥಿಗಳು ಮಹಿಳಾ ಸಿಬ್ಬಂದಿಗಳನ್ನು ಗೌರವಿಸುತ್ತಾರೆ.
ಮಹಿಳೆ ಕುಟುಂಬದ ಸಲಹೆಗಾರ್ತಿಯಾಗಿ, ಕುಟುಂಬದ ದಾದಿ, ಮಕ್ಕಳು ಹಾದಿ ತಪ್ಪಿದಾಗ ತಿದ್ದುವ ಗುರು. ಜೀವನದ ಸರ್ವಶ್ರೇಷ್ಟ ಸ್ಥಾನಗಳನ್ನು ಅಲಂಕರಿಸುವ ಮಹಿಳೆ ತನ್ನ ಜೀವನದ ಬಹುಪಾಲು ಸಮಯವನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಳೆಯುತ್ತಾಳೆ. ಮನಸ್ಸಿನಲ್ಲಿರುವ ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಮಕ್ಕಳಿಗಾಗಿ ಗಂಡನಿಗಾಗಿ, ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ತಾಯಂದಿರಿಗೆ ಕೊಂಚ ಮನರಂಜನೆ ನೀಡಿ ಅವರ ಸ್ವಚ್ಚ ಮನಸ್ಸುಗಳಿಗೆ ಸಂತೃಪ್ತಿ ಭಾವ ಉಣಬಡಿಸುವ ಕಾರ್ಯಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ರತ್ನದೇವೇಗೌಡ ಹೇಳಿದರು.
