Advertisement
8:58 AM Sunday 3-December 2023

ಕುಶಾಲನಗರ : ಶ್ರೀ ಕೈವಾರ ತಾತಯ್ಯ ಜಯಂತಿ : ಒಗ್ಗಟ್ಟಿನಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ : ಆರ್.ಬಾಬು

07/03/2023

ಮಡಿಕೇರಿ ಮಾ.7 : ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸಲು ಸಮುದಾಯ ಬಾಂಧವರ ಒಗ್ಗಟ್ಟು ಅತ್ಯಗತ್ಯವೆಂದು ಕುಶಾಲನಗರದ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ಆರ್.ಬಾಬು ಅಭಿಪ್ರಾಯಪಟ್ಟರು.

ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ಆಶ್ರಯದಲ್ಲಿ ಆಯೋಜಿತ ಶ್ರೀ ಕೈವಾರ ತಾತಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಮುದಾಯ ಭವನಕ್ಕೆ ನಿವೇಶನ ಒದಗಿಸಲು ಸರಕಾರ ಗಮನಹರಿಸುವಂತೆ ಮನವಿ ಮಾಡಿದರು.

ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮೈಸೂರಿನ ಉಪನ್ಯಾಸಕ ಡಾ.ಕೃಷ್ಣಪ್ಪ ಮಾತನಾಡಿ, ಜನಸಾಮಾನ್ಯರಿಗೆ ಅರಿವಾಗುವಂತಹ ಕೀರ್ತನೆಗಳನ್ನು ರಚಿಸಿದ ತ್ರಿಕಾಲ ಜ್ಞಾನಿ ಕೈವಾರ ತಾತಯ್ಯ ಮಹಾನ್ ದಾರ್ಶನಿಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವ ಬಣಜಿಗ, ಬಲಿಜ ಸಮುದಾಯಕ್ಕೆ ಸರಕಾರ ಅಗತ್ಯ ಯೋಜನೆಗಳನ್ನು ರೂಪಿಸುವಂತಾಗಬೇಕಿದೆ. ಸರಕಾರದ ಗಮನ ಸೆಳೆಯಲು ಸಮುದಾಯ ಮತ್ತಷ್ಟು ಸಂಘಟಿತರಾಗುವ ಅವಶ್ಯಕತೆಯಿದೆ. ಪ್ರತಿಷ್ಠೆಯ ಕಾರಣದಿಂದ ಸಮುದಾಯದ ಹೋರಾಟಗಳು ಅವನತಿ ಕಾಣುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕ ಎನ್.ಸ್ವಾಮಿ ಮಾತನಾಡಿ, ಸಮುದಾಯ ಬಾಂಧವರು ಒಗ್ಗಟ್ಟಿನಿಂದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ದಾನಿ ಸೋಮಶೇಖರ್ ಹಾಗೂ ಉಪನ್ಯಾಸಕ ಡಾ.ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಎಂ.ಆರ್.ಗಣೇಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ನಿರಂಜನ್, ಖಜಾಂಚಿ ಟಿ.ಬಿ.ಸತೀಶ್, ಸಹ ಕಾರ್ಯದರ್ಶಿ ಟಿ.ಎನ್.ಜಯರಾಂ, ನಿರ್ದೇಶಕರಾದ ಶ್ರೀನಿವಾಸ್, ಸಿ.ಕೆ.ಕಾಂತರಾಜು, ತುಳಸಿಕಿರಣ್, ಸವಿತಾ ದಯಾನಂದ, ಸಿ.ಎನ್.ಮಹೇಶ್, ಪ್ರಮುಖರಾದ ಸುಬ್ರಹ್ಮಣ್ಯ, ನಿಸರ್ಗಸ್ವಾಮಿ, ನರೇಂದ್ರ, ಸುಮಾ ಮತ್ತಿತರರು ಇದ್ದರು.

ಜಯಂತಿ ಅಂಗವಾಗಿ ಬೈಲುಕೊಪ್ಪದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ತೆರೆದ ವಾಹನದಲ್ಲಿ ಚಂಡೆ ಮೇಳದೊಂದಿಗೆ ಕೈವಾರ ತಾತಯ್ಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.