Advertisement
10:26 AM Sunday 3-December 2023

*ಡಾ.ಸುಬ್ರಮಣಿಯನ್ ಸ್ವಾಮಿ ಅವರನ್ನು ಭೇಟಿ ಮಾಡಿದ ಸಿಎನ್‍ಸಿ ನಿಯೋಗ : ಕೊಡವ ಲ್ಯಾಂಡ್ ಕುರಿತು ಚರ್ಚೆ*

21/09/2023

ಮಡಿಕೇರಿ ಸೆ.21 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ನಿಯೋಗ ಇಂದು ಮಂಗಳೂರಿನಲ್ಲಿ ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರನ್ನು ಮಂಗಳೂರಿನ ವಿಎಚ್‍ಎಸ್ ಪ್ರಮುಖ ರಾಜೀವ್ ಶೆಟ್ಟಿ ಅವರ ನಿವಾಸದಲ್ಲಿ ಭೇಟಿ ಮಾಡಿತು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು 5 ಹಂತಗಳ ಪಾದಯಾತ್ರೆಯ ಕುರಿತು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಚರ್ಚಿಸಿದರು.
ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಮತ್ತಿತರ ಸಾಂವಿಧಾನಿಕ ಬೇಡಿಕೆಗಳ ಪ್ರಬಲ ಪ್ರತಿಪಾದಕರಾಗಿದ್ದಾರೆ. ಸಿಎನ್‍ಸಿಗೆ ಬೆಂಬಲವಾಗಿ ಕೊಡವರ ಪರ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿಯನ್ನು ಹೈಕೋರ್ಟ್‍ನಲ್ಲಿ ಮಂಡಿಸುವ ಮೂಲಕ ಕಾನೂನು ಹೋರಾಟವನ್ನು ಕೂಡ ನಡೆಸುತ್ತಿರುವುದು ಹೆಮ್ಮೆಯ ವಿಚಾರವೆಂದು ನಾಚಪ್ಪ ತಿಳಿಸಿದರು.
ಅತಿ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಅಸ್ತಿತ್ವವನ್ನು ಉಳಿಸಲು ಸಿಎನ್‍ಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಆಯೋಗವೊಂದನ್ನು ರಚಿಸಬೇಕೆನ್ನುವ ನಿಟ್ಟಿನಲ್ಲಿ ಸಾಂವಿಧಾನಿಕ ಪರಿಹಾರವನ್ನು ಸೂಚಿಸಲು ಸ್ವಾಮಿ ಅವರು ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದರು.
ವಿರಾಟ್ ಹಿಂದೂಸ್ಥಾನ ಸಂಘಂ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಪ್ರಮುಖರಾದ ನಿಕುಂಜ್ ಶಾ, ಡಾ.ಸುರೇಂದ್ರ ಶೆಟ್ಟಿ, ವಿಜಯೇಂದ್ರ ಶೆಟ್ಟಿ, ಆಶಿಶ್ ಶೆಟ್ಟಿ, ಗುರುದತ್ ಶೆಟ್ಟಿ, ಸುಧೀರ್ ಭಂಡಾರಿ, ರಾಜೀವ್ ಶೆಟ್ಟಿ, ಸ್ವಪ್ನಾ ಶೆಟ್ಟಿ, ಸಿಎನ್‍ಸಿ ನಿಯೋಗದ ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಚಂಬಂಡ ಜನತ್, ಮಂದಪಂಡ ಮನೋಜ್ ಉಪಸ್ಥಿತರಿದ್ದರು.
ಡಾ.ಸುಬ್ರಮಣಿಯನ್ ಸ್ವಾಮಿ ಅವರು ಎರಡು ದಿನಗಳ ಕರಾವಳಿ ಕರ್ನಾಟಕ-ಮಂಗಳೂರು ಪ್ರವಾಸದಲ್ಲಿದ್ದು, ವಿಎಚ್‍ಎಸ್‍ನ ಗಣೇಶೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.