Advertisement
10:16 AM Sunday 3-December 2023

*ಸೆ.26 ರಿಂದ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ : ಜಾನುವಾರು/ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ನೀಡಿ : ಜಿಲ್ಲಾಧಿಕಾರಿ ವೆಂಕಟ್ ರಾಜಾ*

21/09/2023

ಮಡಿಕೇರಿ ಸೆ.21 : ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಇದೇ ಸೆ.26 ರಿಂದ ಅಕ್ಟೋಬರ್, 25 ರವರೆಗೆ ನಾಲ್ಕನೇ ಸುತ್ತಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡಲಾಗುತ್ತಿದ್ದು, ಈ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮ ಸಂಬಂಧ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ 2030 ರೊಳಗೆ ಜಾನುವಾರುಗಳ ಕಾಲುಬಾಯಿ ಜ್ವರವನ್ನು ನಿಯಂತ್ರಿಸುವಲ್ಲಿ ಹಲವು ಸುತ್ತಿನ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ  ಕೋರಿದರು.
ಕೃಷಿಗೆ ಪೂರಕವಾಗಿ ಜಾನುವಾರು ಸಾಕಾಣಿಕೆ ರೈತರ ಅವಿಭಾಜ್ಯ ಅಂಗವಾಗಿದೆ. ಆರ್ಥಿಕ ಚಟುವಟಿಕೆಗೆ ಪಶುಪಾಲನೆ ಸಹಕಾರಿಯಾಗಿದೆ. ಆ ದಿಸೆಯಲ್ಲಿ ಜಾನುವಾರು/ ರಾಸುಗಳಿಗೆ ಯಾವುದೇ ರೀತಿಯ ರೋಗ ಬರದಂತೆ ನಿಯಂತ್ರಿಸುವುದು ಅತ್ಯಗತ್ಯವಾಗಿದ್ದು, ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಜಾನುವಾರುಗಳು ಲಸಿಕಾ ಕಾರ್ಯಕ್ರಮದಿಂದ ಬಿಟ್ಟು ಹೋಗದಂತೆ ಗಮನಹರಿಸುವಂತೆ ಜಿಲ್ಲಾಧಿಕಾರಿ  ಸ್ಪಷ್ಟ ನಿರ್ದೇಶನ ನೀಡಿದರು.
ಯಾವ ಯಾವ ದಿನದಂದು ಯಾವ ಯಾವ ಗ್ರಾಮದಲ್ಲಿ ಲಸಿಕೆ ನೀಡಲಾಗುತ್ತದೆ ಎಂ ಬಗ್ಗೆ ಮುಂಚಿತವಾಗಿ ಪ್ರಚುರಪಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ  ಸಲಹೆ ಮಾಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ ಅವರು ಮೂರನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ 76,920 ಜಾನುವಾರು ಸಂಖ್ಯೆ ಗುರಿಯಲ್ಲಿ 66,710 ಜಾನುವಾರುಗಳಿಗೆ ಲಸಿಕೆಯನ್ನು ನೀಡಿ ಶೇ.84 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಸಂಬಂಧಿಸಿದಂತೆ ಲಸಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 2 ಎಂ.ಎಲ್.ಒಳಗೊಂಡ 75,325 ಸಿರೀಂಜ್‍ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪಶುಪಾಲನಾ ಇಲಾಖೆಯ ಮೂರು ಸಂಚಾರಿ ಪಶು ಚಿಕಿತ್ಸಾ ವಾಹನಗಳು ಹಾಗೂ 8 ಹಾಲು ಉತ್ಪಾದಕರ ಮಹಾ ಮಂಡಳದ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಪಶುಪಾಲನಾ ಇಲಾಖೆಯ ಆಯುಕ್ತಾಲಯದಿಂದ 77 ಸಾವಿರ ಡೋಸ್ ಲಸಿಕೆ ಸರಬರಾಜು ಆಗಿದೆ. ಒಂದು ವಾಕ್ ಇನ್ ಕೂಲರ್, 7 ಐಸ್ ಲೈನ್ ರೆಫ್ರಿಜರೇಟರ್, 5 ಐಎಲ್ ಆರ್‍ಎಫ್, 47 ಶೀತಲೀಕರಣಯಂತ್ರ ಹಾಗೂ 182 ವ್ಯಾಕ್ಸಿನ್ ಕ್ಯಾರಿಯರ್ ಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ ಎಂದು ಡಾ.ಲಿಂಗರಾಜು ದೊಡ್ಡಮನಿ  ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ಲಸಿಕೆ ಅನುಷ್ಠಾನ ಸಂಬಂಧಿಸಿದಂತೆ 14 ತಾಂತ್ರಿಕ ಸಿಬ್ಬಂದಿ, 33 ಅರೆ ತಾಂತ್ರಿಕ ಸಿಬ್ಬಂದಿ, 09 ಇಲಾಖಾ ಡಿ ದರ್ಜೆ ಸಿಬ್ಬಂದಿ, 12 ಬಾಹ್ಯ ಮೂಲದ ಡಿ ದರ್ಜೆ ಸಿಬ್ಬಂದಿ, 4 ಹೆಚ್ಚುವರಿ ಸಿಬ್ಬಂದಿ ಒಟ್ಟು 72 ಲಸಿಕಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.
ಪಾಲಿಕ್ಲೀನಿಕ್ ಉಪ ನಿರ್ದೇಶಕರಾದ ಡಾ.ತಿಮ್ಮಯ್ಯ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ(ಮಡಿಕೇರಿ), ಡಾ.ಶಾಂತೇಶ್(ಪೊನ್ನಂಪೇಟೆ), ಡಾ.ನವೀನ್ (ವಿರಾಜಪೇಟೆ), ಡಾ.ಬಾದಾಮಿ(ಸೋಮವಾರಪೇಟೆ), ಡಾ.ಶ್ರೀದೇವು (ಕುಶಾಲನಗರ), ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ.ಬಿ.ಎಲ್.ಪ್ರಸನ್ನ ಇತರರು ಹಲವು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ 9448647276, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಸೋಮವಾರಪೇಟೆ 9448655660, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ವಿರಾಜಪೇಟೆ 9141093996, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಕುಶಾಲನಗರ 8951404025, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಪೊನ್ನಂಪೇಟೆ 9449081343 ನ್ನು ಸಂಪರ್ಕಿಸಬಹುದು.
ಮತ್ತಷ್ಟು ಮಾಹಿತಿ: ಕೊಡಗು ಜಿಲ್ಲೆಯಲ್ಲಿ ಸೆ.26 ರಿಂದ ಅ.25 ರವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದನ, ಎಮ್ಮೆ, ಆಡು/ ಕುರಿ, ಹಂದಿ, ಸೇರಿದಂತೆ ಎಲ್ಲಾ ಸೀಳು ಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದು ರೈತರಿಗೆ ಅಪಾರವಾದ ಅರ್ಥಿಕ ನಷ್ಟವನ್ನುಂಟು ಮಾಡುವ ರೋಗವಾಗಿದೆ ಎಂದರು.

ಕಾಲುಬಾಯಿ ಜ್ವರವು ಒಂದು ವೈರಾಣು ರೋಗವಾಗಿದ್ದು ನಿರ್ಧಿಷ್ಟ ಚಿಕಿತ್ಸೆ ಅಸಾಧ್ಯವಾಗಿದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಸಹ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತು/ ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ವಿವರಿಸಿದರು.
ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿದೆ. 20 ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವಸಿದ್ದತೆಯನ್ನು ಮಾಡಿಕೊಳಲಾಗಿದ್ದು 67 ಲಸಿಕಾದಾರರನ್ನೊಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿದೆ. ಲಸಿಕಾದಾರರು ರೈತರ/ ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕಲಿದ್ದಾರೆ.
ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 4 ತಿಂಗಳ ಮೇಲ್ಪಟ್ಟ ಎಲ್ಲಾ ದನ/ಎಮ್ಮೆ ಲಸಿಕೆ ಹಾಕಿಸುವಂತೆ ಉಪ ನಿರ್ದೇಶಕರು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಮನವಿ ಮಾಡಿದ್ದಾರೆ.