*ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾಗಿ ಮುಂಡಂಡ ಸಿ.ನಾಣಯ್ಯ ಆಯ್ಕೆ*

ಮಡಿಕೇರಿ ಸೆ.26 : ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷರಾಗಿ ಮುಂಡಂಡ ಸಿ.ನಾಣಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕುಲ್ಲೇಟೀರ ಅಜಿತ್ ನಾಣಯ್ಯ ಅವರು ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಯಾವುದೇ ಕಾರಣಕ್ಕು ಚುನಾವಣೆಗೆ ಅವಕಾಶ ನೀಡದೆ ಒಮ್ಮತದಿಂದ ಆಯ್ಕೆ ಪ್ರಕ್ರಿಯೆ ನಡೆಯಬೇಕೆಂದು ಹಿರಿಯರಿಂದ ಸಲಹೆ ಬಂದ ಹಿನ್ನೆಲೆ ಅಜಿತ್ ನಾಣಯ್ಯ ಅವರು ಸ್ಪರ್ಧೆಯಿಂದ ಹಿಂದೆ ಸರಿದರು.
ಕಾರ್ಯದರ್ಶಿ ಸ್ಥಾನಕ್ಕೆ ಮೂವರು ಆಕಾಂಕ್ಷಿಗಳಿದ್ದರಾದರೂ ಹೊಂದಾಣಿಕೆ ಸೂತ್ರದ ಮೂಲಕ ಮುಕ್ಕಾಟಿರ ಎಂ.ವಿನಯ್ ಅವರು ಅವಿರೋಧವಾಗಿ ಆಯ್ಕೆಯಾದರು. ಆದರೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಜಿತ್ ನಾಣಯ್ಯ ಅವರಿಗೆ ಕಾರ್ಯದರ್ಶಿ ಸ್ಥಾನ ಬಿಟ್ಟುಕೊಡುವ ಮೂಲಕ ವಿನಯ್ ಸೌಹಾರ್ದತೆಯನ್ನು ಮೆರೆದರು.
ಒಟ್ಟು 21 ಸ್ಥಾನಗಳಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾದರು, ಏಳು ಸ್ಥಾನಗಳಿಗೆ ಚುನಾವಣೆ ನಡೆಯಿತು.
ಮುಂದೆ ನಡೆಯುವ ಆಡಳಿತ ಮಂಡಳಿಯ ಕಾರ್ಯಕಾರಿಣಿ ಸಭೆಯಲ್ಲಿ ಅಜಿತ್ ನಾಣಯ್ಯ ಅವರನ್ನು ಕಾರ್ಯದರ್ಶಿಯನ್ನಾಗಿ ಹಾಗೂ ವಿನಯ್ ಅವರನ್ನು ನಿರ್ದೇಶಕರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲು ಚುನಾವಣಾ ಪ್ರಕ್ರಿಯೆಯ ಸಭೆಯು ನಿರ್ಧರಿಸಿತು.
