*ಶ್ರೀವೀರಭದ್ರೇಶ್ವರ ಸ್ವಾಮಿ ಜನ್ಮ ವರ್ದಂತಿ : ಬಿಲ್ವಪತ್ರೆ ಮತ್ತು ರುದ್ರಾಕ್ಷಿ ಗಿಡ ನೆಡುವ ಕಾರ್ಯಕ್ರಮ*

ಮಡಿಕೇರಿ ಅ.1 : ಮನುಕುಲಕ್ಕೆ ನೈತಿಕತೆಯ ಪಾಠಮಾಡಿ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಬದುಕಿನ ಸಂಸ್ಕಾರ ಅರುಹಿದ ಚೈತನ್ಯ ಶಕ್ತಿಯೇ ಶ್ರೀವೀರಭದ್ರ ದೇವರು. ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಧರ್ಮ ಮಾರ್ಗದಲ್ಲಿ ಕೈಹಿಡಿದು ಮುನ್ನಡೆಸಲು ಬೆಳಕನಿತ್ತ ಮಹಾನುಭಾವ ವೀರಭದ್ರ ಎಂದು ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮತ್ತು ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಸಂಯುಕ್ತಾಶ್ರಯದಲ್ಲಿ ನೀರುಗುಂದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ, ಕೊಡ್ಲಿಪೇಟೆ, ಕಿರಿಕೊಡ್ಲಿ, ಕೋಟೆಯೂರು, ಗೌಡಳ್ಳಿ, ನೇಗಳ್ಳೆ ಶ್ರೀ ವೀರಭದ್ರ ದೇವಾಲಯ ಸಮಿತಿ ಇವರುಗಳ ಸಹಯೋಗದೊಂದಿಗೆ ನಡೆದ ಶ್ರೀವೀರಭದ್ರೇಶ್ವರ ಸ್ವಾಮಿ ಜನ್ಮ ವರ್ದಂತಿಯ 5ನೇ ವರ್ಷದ ಮಹೋತ್ಸವ, ಬಿಲ್ವಪತ್ರೆ ಮತ್ತು ರುದ್ರಾಕ್ಷಿ ಗಿಡ ನೆಡುವ ಕಾರ್ಯಕ್ರಮಕ್ಕೆ ನೀರಗುಂದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಚಾಲನೆ ನೀಡಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಮಾನವನ ಇಹದ ಬದುಕಿನ ಸ್ತರಗಳಲ್ಲಿ ಇರಬಹುದಾದ ಜನವಿರೋಧಿ ಕೃತ್ಯಗಳ ನಿವಾರಣೆಗೆ ಶ್ರೀವೀರಭದ್ರ ದೇವರ ಮಹಾಶಕ್ತಿ ಸಂಚಯವು ನಿರಂತರ ಪ್ರಭಾವ ಬೀರುತ್ತದೆ ಎಂದರು.
ಕೊಡ್ಲಿಪೇಟೆ ವೀರಭದ್ರ ದೇವಾಲಯದಲ್ಲಿ ಏರ್ಪಡಿಸಿದ್ದ ಅಷ್ಪೋತ್ತರ ಪೂಜಾ ಕಾರ್ಯಕ್ರಮದಲ್ಲಿ ಕಲ್ಲುಮಠಾದ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ ವೀರಭದ್ರ ಅಧರ್ಮಗಳ ವಿರುದ್ಧ ಹೋರಾಡಲು ಅವತರಿಸಿ ಪ್ರೇರಣಾದಾಯಕನಾಗಿದ್ದು ಆತನ ಅವಕಾರವೇ ಅತ್ಯಂತ ವಿಸ್ಮಯ ಮತ್ತು ಪವಾಡ ಸದೃಶವಾಗಿದೆ ಎಂದು ತಿಳಿಸಿದರು.
ಭಾದ್ರಪದ ಮಾಸದಲ್ಲಿ ವೀರಭದ್ರಸ್ವಾಮಿಯ ಜಯಂತಿ ಆಚರಿಸಲಾಗುತ್ತಿದೆ ದೇವಸ್ಥಾನದಲ್ಲಿ ಬೆಳಗಿನ ಜಾವ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು. ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ದೊಡ್ಡಬಳ್ಳಾಪುರ ಮಠದ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ ನೀರಗುಂದ ಗ್ರಾಮದ ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಎ.ಕುಮಾರ್ ಮತ್ತು ಸದಸ್ಯರು, ಕೊಡ್ಲಿಪೇಟೆ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ, ಕಾರ್ಯದರ್ಶಿ ಉ.ಪಿ. ನಾಗೇಶ್ ಮತ್ತು ಸಮಿತಿ ಸದಸ್ಯರು, ಕಿರಿಕೊಡ್ಲಿ -ಮಾಗಡಹಳ್ಳಿ ಗ್ರಾಮದ ಭಕ್ತಾಧಿಗಳು, ಸಿದ್ದಗಂಗಾಮಠ ಬೆಂಗಳೂರು ಶಾಖೆ ಮಹಿಳಾ ಸಂಘಟನಾ ಘಟಕದ ಅಧ್ಕಕ್ಷೆ ಉಷಾಯೋಗಾನಂದ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಸಂಚಾಲಕ ಎಸ್.ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ದಿವಾಕರ್, ಕಾರ್ಯದರ್ಶಿ ದಯಾನಂದ ಸಮಿತಿ ಸದಸ್ಯರು ಇದ್ದರು.
