ವಿರಾಜಪೇಟೆ ಡಿ.21 : ಜಗತ್ತಿಗೆ ಶಾಂತಿಯ ಸಂದೇಶ ಸಾರುವ ಹಬ್ಬವೇ ಕ್ರಿಸ್ಮಸ್ ಹಬ್ಬವಾಗಿದೆ ಎಂದು ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟರು. ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನಲ್ಲಿ ನಡೆದ ಕ್ರಿಸ್ ಮಸ್ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಶಾಂತಿ, ಪ್ರೀತಿ, ಬ್ರಾತೃತ್ವ ಕ್ರಿಸ್ ಮಸ್ ನ ಹಬ್ಬದ ಸಂದೇಶಗಳಾಗಿವೆ. ಯೇಸು ಕ್ರಿಸ್ತರು ಜನಿಸಿದ ಪುಣ್ಯ ಕ್ಷಣ ಇದಾಗಿದೆ. ವಿಶ್ವದಾದ್ಯಂತ ಆಚರಿಸಲ್ಪಡುವ ಈ ಹಬ್ಬವು ಇಡೀ ವಿಶ್ವದಲ್ಲಿ ಸುಖ ಶಾಂತಿಯನ್ನು ಮೂಡಿಸಲಿ. ಪರಸ್ಪರ ಅನ್ಯೋನ್ಯತೆ ನೆಲೆಸಲಿ ಎಂದರು.
ಸಂತ ಅನ್ನಮ್ಮ ಪಿ.ಯು.ಕಾಲೇಜು ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ಮಾತನಾಡಿ, ಕ್ರಿಸ್ಮಸ್ ದೇವರ ಹಬ್ಬವಾಗಿದ್ದು, ಯೇಸು ಕ್ರಿಸ್ತರ ಜನನದ ಸಂಕೇತವನ್ನು ತೋರಿಸುತ್ತದೆ. ಲೋಕಕಲ್ಯಾಣಕಾಗಿ ಯೇಸು ಕ್ರಿಸ್ತರ ಜನನವಾಯಿತು. ಈ ಕ್ರಿಸ್ಮಸ್ ಹಬ್ಬವು ಎಲ್ಲರಲ್ಲಿ ಶಾಂತಿ ನೆಮ್ಮದಿಯನ್ನು ಹೊತ್ತು ತರಲಿ ಎಂದು ಶುಭ ಹಾರೈಸಿದರು.

ಸೆಂಟ್ ಆನ್ಸ್ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಪ್ರತಿಯೊಂದು ಹಬ್ಬವು ತನ್ನದೇಯಾದ ಸಂದೇಶವನ್ನು ನೀಡುತ್ತದೆ. ಭಾರತದಲ್ಲಿ ಆಚರಿಸುವ ಹಬ್ಬಗಳು ಸಾಮಾನ್ಯವಾಗಿ ಒಟ್ಟಾಗಿ ಆಚರಿಸುದರಿಂದ ವೈವಿಧ್ಯತೆಯಲ್ಲಿ ಏಕತೆ ಎಂಬ ತತ್ವಕ್ಕೆ ಪೂರಕವಾಗಿದೆ ಎಂದರು. ಸಮಾನತೆ, ಸಹಬಾಳ್ವೆ, ರಾಷ್ಟ್ರ ಪ್ರೇಮ ಬೆಳೆಯಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತ ಯುವ ಘಟಕಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಉಪನ್ಯಾಸಕಿ ವಿಲೀನ ಗೋನ್ಸಾಲ್ವೇಸ್ ರವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಕ್ಯಾರೋಲ್ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಉಪನ್ಯಾಸಕರಾದ ವಿವೇಕ್ ನಿರೂಪಿಸಿ, ಮೋನಿಕಾ ವಂದಿಸಿದರು. ಈ ಸಂದರ್ಭದಲ್ಲಿ ಸಂತ ಅನ್ನಮ್ಮ ಕಾಲೇಜುವಿನ ಉಪನ್ಯಾಸಕರು, ಸಿಬ್ಬಂದಿಗಳು, ಪದವಿ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತದನಂತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.








