ಮಡಿಕೇರಿ ಜ.3 : ಮೂರು ದಶಕಗಳ ಹಿಂದಿನ ಶ್ರೀರಾಮ ಜನ್ಮಭೂಮಿ ಹೋರಾಟದ ಘಟನೆಯನ್ನು ಆಧರಿಸಿ ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದ ಸ್ಕ್ವಾಡ್ರರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು ಒಂದು ಸಮುದಾಯವನ್ನು ಓಲೈಸಿಕೊಳ್ಳುವುದಕ್ಕಾಗಿ ಸರ್ಕಾರ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸುಮಾರು ಐದು ನೂರು ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರದ ಕನಸು ನನಸಾಗಿದೆ ಎಂದರು.
ರಾಮಮಂದಿರದ ಉದ್ಘಾಟನೆ ಜ.22 ರಂದು ನಡೆಯಲಿದೆ. “ನಾವೂ ರಾಮ ಭಕ್ತರೆ” ಎಂದು ಬಾಯಿಯಲ್ಲಿ ಮಾತ್ರ ಹೇಳಿಕೊಂಡ ಕಾಂಗ್ರೆಸ್ಸಿಗರು ಸುಮಾರು 32 ವರ್ಷಗಳ ಹಳೆಯ ಪ್ರಕರಣದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ರಾಮ ಭಕ್ತ ಕರಸೇವಕರ ಬಂಧನಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂರು ದಶಕಗಳಷ್ಟು ಹಳೆಯ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ ಅವರು, ರಾಮ ಮಂದಿರದ ಉದ್ಘಾಟನೆಯ ಹಂತದಲ್ಲಿ ಕರಸೇವಕರನ್ನು ಬಂಧಿಸುವ ಮೂಲಕ ಭಾವನೆಗಳನ್ನು ಕೆಣಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕರಸೇವಕರನ್ನು ಸರ್ಕಾರ ಬಂಧಿಸಿರುವುದು ಖಂಡನೀಯ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರಸೇವೆ ನಡೆಸಿದವರನ್ನೆಲ್ಲ ಬಂಧಿಸುವ ತಾಕತ್ತು ಇದ್ದಲ್ಲಿ ಅದನ್ನೂ ಸರ್ಕಾರ ಮಾಡಲಿ. ನಾವು ಲಾಠಿಗೂ ಸಿದ್ಧ, ಜೈಲಿಗೂ ಸಿದ್ಧವೆಂದು ತಿಳಿಸಿದ ಅವರು, ಈ ರೀತಿ ಮಾಡಿದಲ್ಲಿ ಈಗ ಇರುವ ಜೈಲುಗಳು ಸಾಕಾಗಲಾರದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ನಗರಸಭಾ ಸದಸ್ಯರಾದ ಕೆ.ಎಸ್.ರಮೇಶ್, ಅರುಣ್ ಶೆಟ್ಟಿ, ಶ್ವೇತಾ, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಪ್ರಮುಖರಾದ ಕನ್ನಿಕೆ, ಅರುಣ್ ಕುಮಾರ್, ಜಗದೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







