ಮಡಿಕೇರಿ ಜ.7 : ರೋಟರಿ ರಸ್ತೆ ಸುರಕ್ಷತಾ ಅಭಿಯಾನದಡಿಯಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿ ಎರಡು ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಮೈಸೂರು ಕಡೆಯಿಂದ ಮಡಿಕೇರಿ ನಗರ ಪ್ರವೇಶಿಸುವ ಮತ್ತು ಮಡಿಕೇರಿ ನಗರದಿಂದ ಸಿದ್ದಾಪುರ ಕಡೆಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಫಲಕಗಳನ್ನು ಹಾಕಲಾಗಿದೆ.
ಮಡಿಕೇರಿ ನಗರದ ಸಂಚಾರಿ ಪೊಲೀಸ್ ಠಾಣಾ ಎಎಸ್‌ಐ ನಂದ ಹಾಗೂ ರೋಟರಿ ವುಡ್ಸ್ ನ ಅಧ್ಯಕ್ಷ ವಸಂತ್ ಕುಮಾರ್ ಜಂಟಿಯಾಗಿ ಫಲಕಗಳನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಎಎಸ್‌ಐ ನಂದ ರಸ್ತೆ ಸುರಕ್ಷತಾ ಅಭಿಯಾನ ಒಂದು ನಿಲ್ಲದ ಪ್ರಕ್ರಿಯೆಯಾಗಿದೆ. ಇದು ಸದಾ ನಡಿಯುತ್ತಿರಬೇಕು, ಆ ಮೂಲಕ ಜನ ಜಾಗೃತಿಯನ್ನು ಮೂಡಿಸುತ್ತಿರಬೇಕು ಎಂದರು.
ರೋಟರಿ ಸಂಸ್ಥೆ ನಡೆಸುತ್ತಿರುವ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪೊಲೀಸ್ ಇಲಾಖೆಯೊಂದಿಗೆ ಸೇರಿಕೊಂಡು ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವೆಂದರು.
ರೋಟರಿ ವುಡ್ಸ್ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ ರೋಟರಿ ಸಂಸ್ಥೆ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಸ್ತೆ ಸುರಕ್ಷತಾ ಅಭಿಯಾನವನ್ನು ಕೂಡ ಹಮ್ಮಿಕೊಂಡಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನೀಡುತ್ತಿರುವ ಸಹಕಾರ ಮೆಚ್ಚತಕ್ಕದ್ದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರೋಟರಿ ವುಡ್ಸ್ ಸಂಸ್ಥೆ ಮತ್ತಷ್ಟು ಪರಿಣಾಮಕಾರಿ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭ ರೋಟರಿ ವಲಯ ಸೇನಾನಿ ಘಟಕದ ಸಂಪತ್ ಕುಮಾರ್, ರವಿ ಕುಮಾರ್, ರಾಜೇಶ್ ಚೌದರಿ, ಭಗತ್ ರಾಜ್, ಕಶ್ಯಪ್ ಮತ್ತಿತರರು ಹಾಜರಿದ್ದರು.










