ಚೆಯ್ಯಂಡಾಣೆ ಜ.30 NEWS DESK : ಇತಿಹಾಸ ಪ್ರಸಿದ್ಧ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ಧ್ವಜಾರೋಹಣ ನೆರೆವೇರಿಸುವ ಮೂಲಕ ಉರೂಸ್ ಗೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮ :: ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ಉದ್ಘಾಟಿಸಿ ಮಾತನಾಡಿ, ಎಡಪಾಲ ಅಂಡತ್ ಮಾನಿ ದರ್ಗಾ ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯದ ನಾನಾ ಭಾಗದ ಹಾಗೂ ಕೇರಳದ ಹಲವಾರು ಜನರ ಮಾರಕ ರೋಗಗಳನ್ನು ಗುಣಪಡಿಸಿದ ಹಲವಾರು ಉದಾರಣೆಗಳನ್ನು ವಿವರಿಸಿ ಎಡಪಾಲ ಅಂಡತ್ ಮಾನಿ ದರ್ಗಾದ ಪುಣ್ಯ ಕಾರ್ಯವನ್ನು ಸ್ಮರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಎಡಪಾಲ ಜಮಾಅತ್ ಮಾಜಿ ಅಧ್ಯಕ್ಷ ಬಷೀರ್, ಉರೂಸ್ ಸಮಾರಂಭದಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಎಲ್ಲರು ಒಟ್ಟಾಗಿ ಭಾಗವಹಿಸುವ ಮೂಲಕ ಸೌಹಾರ್ದತೆಗೆ ಉರೂಸ್ ಸಾಕ್ಷಿಯಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಯು.ಶಾಫಿ, ಎಲ್ಲರು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬಾಳಬೇಕು, ಸೇಡಿನಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ದೇವರು ಆಶೀರ್ವದಿಸಿದರೆ ಮಾತ್ರ ಉನ್ನತಿಗೇರಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಜಿಲ ಮುದರಿಸ್ ನಿಝರ್ ಅಹ್ಸನಿ ಕಕ್ಕಡಿಪುರಂ, ಅಂಡತ್ ಮಾನಿ ಮಖಾಂ ಇತಿಹಾಸ ಪ್ರಸಿದ್ಧವಾಗಿದೆ, ಹಲವರು ತಮ್ಮ ಕಷ್ಟಗಳಿಗೆ ಇಲ್ಲಿ ಪರಿಹಾರವನ್ನು ಕಂಡುಕೊಂಡಿದ್ದು, ಜನರ ಮನಸುಗಳನ್ನು ಅರಿತುಕೊಳ್ಳುವ ಶಕ್ತಿ ಈ ಸ್ಥಳಕ್ಕಿದೆ ಎಂದರು.
ರಾತ್ರಿ ಕೇರಳದ ಪ್ರಖ್ಯಾತ ವಾಗ್ಮಿ ಅಬಿದ್ ಹುದವಿ ತಚ್ಚಣ್ಣ ಧಾರ್ಮಿಕ ಮತ ಪ್ರವಚನಕ್ಕೆ ನೇತೃತ್ವ ವಹಿಸಿ ಮಾತನಾಡಿದರು.
ಗ್ರಾ.ಪಂ ಸದಸ್ಯರಾದ ಕೆ.ಇ.ಮಹಮ್ಮದ್, ಸಿ.ಇ.ಸುಬೈರ್, ಅಬ್ದುಲ್ ರಝಕ್ ಫೈಝಿ, ಸದರ್ ಮುಹಲಿಮ್ ಹಮೀದ್ ಫೈಝಿ ಹಾಗೂ ವಿವಿಧ ಸಾಮಾಜಿಕ, ರಾಜಕೀಯ, ಉಲಮಾ ಉಮಾರ ನೇತಾರರು ಹಾಜರಿದ್ದರು.
ಮುದರಿಸ್ ನಿಝರ್ ಫೈಝಿ ಪ್ರಾರ್ಥಿಸಿದರು. ಜಮಾಅತ್ ಉಪಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿದರು. ಸಿನಾನ್ ಶರಫಿ, ಹಂಝ ಹಾಗೂ ಸಿದ್ಧಿಕ್ ಮುಸ್ಲಿಯಾರ್ ನಿರೂಪಿಸಿದರು. ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ವರದಿ : ಅಶ್ರಫ್






