
ಮಡಿಕೇರಿ ಏ.12 NEWS DESK : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ಮತದಾನದ ಪ್ರಮಾಣ ಅಧಿಕಗೊಳಿಸಲು ಈಗಾಗಲೇ ನಾನಾ ರೀತಿಯ ಚಟುವಟಿಕೆಗಳ ಮೂಲಕ ಕ್ರೀಯಾಶೀಲವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಇದೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾಳ್ತಿಲ ಗ್ರಾಮದ ಕಶೆಗೋಡಿ ಭಾಗದ ಮಾಣಿ ಪರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಗಳಾದ ಸನ್ನಿಧಿ ಕಶೆಕೋಡಿ, ಸಾರ್ವಿ ಸ್ಕಂದ, ಸ್ತುತಿ, ಆದ್ಯ, ಹಾಗೂ ಸಮೃದ್ಧಿ ಇವರುಗಳು ಮಡಿಕೇರಿಯ ವಿವಿಧ ಪ್ರದೇಶಗಳಲ್ಲಿ ತಮ್ಮದೇ ಹಾಡಿನ ಶೈಲಿ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ಉಪವಿಭಾಗಾಧಿಕಾರಿ ವಿನಾಯಕ್ ನಾರ್ವಡೆ ಅವರು ಈ ಮಕ್ಕಳ ಮತದಾನದ ಜಾಗೃತಿ ಕಾರ್ಯಕ್ಕೆಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಕಚೇರಿಯಲ್ಲಿ ಮಕ್ಕಳನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ಪುಟ್ಟ ಮಕ್ಕಳ ಚುನಾವಣಾ ಮತದಾನದ ಜಾಗೃತಿ ಕಾರ್ಯವನ್ನು ನಿರಂತರವಾಗಿ ನಡೆಸುವ ಮೂಲಕ ಮತದಾನದ ಪ್ರಮಾಣ ಅಧಿಕಗೊಳಿಸಲು ಮಕ್ಕಳು ತಮ್ಮದೇ ಆದ ಭಾಷೆ ಹಾಗೂ ಹಾಡಿನ ಶೈಲಿಯ ಮೂಲಕ ಮತದಾರರಿಗೆ ಮನವರಿಕೆ ಮಾಡಲಿ ಎಂದು ಹಾರೈಸಿದರು.









