

ಮಡಿಕೇರಿ ಮೇ 1 NEWS DESK : ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ “ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ದಿನ ನಡೆದ ಟೀಮ್ ಕೊಡವ ಟ್ರೈಬ್ ಮತ್ತು ಕೂರ್ಗ್ ಬ್ಲಾಸ್ಟರ್ಸ್ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಕೂರ್ಗ್ ಬ್ಲಾಸ್ಟರ್ಸ್ ತಂಡ 4 ವಿಕೆಟ್‍ಗಳ ಗೆಲುವನ್ನು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಕೊಡವ ಟ್ರೈಬ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್‍ಗಳನ್ನು ಮಾಡುವ ಮೂಲಕ ಎದುರಾಳಿ ತಂಡಕ್ಕೆ 158 ರನ್‍ಗಳ ಗೆಲುವಿನ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಯಾಗಿ ಕೂರ್ಗ್ ಬ್ಲಾಸ್ಟರ್ಸ್ ತಂಡ 17.4 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್‍ಗಳನ್ನು ಕಲೆ ಹಾಕುವ ಮೂಲಕ ಗೆಲುವು ಸಾಧಿಸಿತು.
::: ಕಾರ್ತಿಕ್ ಪಂದ್ಯ ಪುರುಷೋತ್ತಮ :::
ವಿಜೇತ ತಂಡದ ಪರವಾಗಿ ಆಲ್ ರೌಂಡ್ ಆಟದ ಪ್ರದರ್ಶನ ನೀಡಿದ ಕಾರ್ತಿಕ್ ಅವರು 14 ಎಸೆತಗಳಲ್ಲಿ 44 ರನ್‍ಗಳನ್ನು ಗಳಸಿದರು. ಅಲ್ಲದೆ ತಮ್ಮ ಸೊಗಸಾದ ಬೌಲಿಂಗ್ ಮೂಲಕ ಮೊದಲ ಸರದಿಯಲ್ಲಿ ಬ್ಯಾಟ್ ಮಾಡಿದ ಕೊಡವ ಟ್ರೈಬ್ ತಂಡದ ಮೂರು ವಿಕೆಟ್‍ಗಳನ್ನು 18 ರನ್ ನೀಡುವ ಮೂಲಕ ಕಬಳಿಸಿದರು. ಆ ತಂಡದ ರನ್ ಓಟಕ್ಕೆ ಕಡಿವಾಣ ಹಾಕಿ ಗಮನ ಸೆಳೆದರಲ್ಲದೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.









