
ಸುಂಟಿಕೊಪ್ಪ ಜೂ.2 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ನೂತನ ಧರ್ಮಗುರುಗಳಾಗಿ ರೇ.ವಂ.ಫಾ.ವಿಜಯಕುಮಾರ್ ಭಾನುವಾರ ಅಧಿಕಾರ ವಹಿಸಿಕೊಂಡರು.
ಸಂತ ಅಂತೋಣಿ ದೇವಾಲಯದಲ್ಲಿ ಮಡಿಕೇರಿ ವಲಯ ಗುರುಗಳು, ಸಂತ ಮೈಕಲರ ದೇವಾಲಯದ ಧರ್ಮಗುರುಗಳಾದ ರೇ.ವಂ.ಫಾಧರ್ ಜಾರ್ಜ್ ದೀಪಕ್ ಹಾಗೂ ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾದ ಅವಿನಾಶ್ ಅವರುಗಳು ದಿವ್ಯ ಬಲಿಪೂಜೆಯನ್ನು ಸರ್ಮಪಿಸಿದರು. ಸಂತ ಅಂತೋಣಿ ದೇವಾಲಯದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಫಾ.ಅರುಳ್ ಸೇಲ್ವಕುಮಾರ್ ಅವರು ವರ್ಗಾವಣೆಗೊಂಡಿದ್ದು ತೆರವಾದ ಸ್ಥಾನಕ್ಕೆ ಮೈಸೂರು ಸಂತ ಜೋಸೆಫರ ದೇವಾಲಯದಲ್ಲಿ ಧರ್ಮಗುರುಗಳಾಗಿದ್ದ ರೇ.ವಂ.ಫಾ.ವಿಜಯಕುಮಾರ್ ಅವರನ್ನು ನೇಮಿಸಲಾಗಿದೆ. ಮಡಿಕೇರಿ ವಲಯ ಗುರುಗಳಾದ ರೇ.ವಂ.ಫಾಧರ್ ಜಾರ್ಜ್ ದೀಪಕ್ ಅವರು ನೂತನ ಧರ್ಮಗುರುಗಳಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ರೇ.ವಂ.ಫಾ.ವಿಜಯಕುಮಾರ್ ಅವರ ಸೇವೆಯಿಂದ ಈ ದೇವಾಲಯವು ಮತ್ತಷ್ಟು ಏಳಿಗೆಯನ್ನು ಕಾಣಲಿ ಎಂದು ಹಾರೈಸಿದರು. ನೂತನ ಧರ್ಮಗುರು ರೇ.ವಂ.ಫಾ.ವಿಜಯಕುಮಾರ್ ಮಾತನಾಡಿ ಎಲ್ಲರ ಪ್ರೀತಿ, ವಿಶ್ವಾಸ, ಸಲಹೆ ಸಹಕಾರ ಪಡೆದು ಉತ್ತಮ ಸೇವೆಯನ್ನು ಸಲ್ಲಿಸುವ ಆಶಯವನ್ನು ವ್ಯಕ್ತಪಡಿಸಿದರು.








