
ಮಡಿಕೇರಿ ಜೂ.10 NEWS DESK : ಕಾಡಾನೆ ದಾಳಿಗೆ ಕಾರೊಂದು ಜಖಂಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪ ಏಳನೇ ಹೊಸಕೋಟೆಯ ಹೆದ್ದಾರಿಯಲ್ಲಿ ನಡೆದಿದೆ.
ಕಾಫಿ ತೋಟದೊಳಗಿನಿಂದ ಹೆದ್ದಾರಿಗೆ ದಿಢೀರ್ ಆಗಿ ಬಂದ ಕಾಡಾನೆ ಏಕಾಏಕಿ ಕಾರಿನ ಮೇಲೆ ದಾಳಿ ಮಾಡಿ ಕಾಲ್ಕಿತ್ತಿದೆ. ಈ ಆನೆ ಮರಳಿದಂತೆ ಮತ್ತೊಂದು ಕಾಡಾನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ಕಾರು ಸವಾರರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು.
ನಿರಂತರವಾಗಿ ಸುಂಟಿಕೊಪ್ಪ- ಕುಶಾಲನಗರ ಭಾಗದ ಹೆದ್ದಾರಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ನಿತ್ಯ ಆತಂಕ ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.








