
ಸೋಮವಾರಪೇಟೆ ಜೂ.10 NEWS DESK : ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆಯನ್ನು ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕಕ್ಕೆ ಒತ್ತಾಯಿಸಿ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ನವೀನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲು ಮುಂದಾದರು. ತಡವಾಗಿ ಹೊರಬಂದ ತಹಶೀಲ್ದಾರ್ ವಿರುದ್ಧ ಅಸಮಾಧಾನ ಹೊರಹಾಕಿದ ಪ್ರತಿಭಟನಾಕಾರರು ವೈದ್ಯರ ನೇಮಕಕ್ಕೆ ಒಂದು ವಾರದ ಗಡುವು ನೀಡಿದರು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಸ್.ಜಿ.ಮೆದಪ್ಪ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಸಮಯಗಳಿಂದ ವೈದ್ಯರುಗಳಿಲ್ಲದೆ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.ಇರುವ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳನ್ನು ಮಡಿಕೇರಿ, ಮೈಸೂರು ಹಾಗೂ ಮಂಗಳೂರಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಬಡ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದೆಲ್ಲಾ ಅರಿವಿದ್ದರೂ ಸ್ವತಃ ವೈದ್ಯರಾಗಿರುವ ಶಾಸಕರು ನಿರ್ಲಕ್ಷ್ಯ ಭಾವನೆ ತೋರುತಿದ್ದಾರೆ ಎಂದು ಆರೋಪಿಸಿದರು.








