
ಮಡಿಕೇರಿ ಜೂ.10 NEWS DESK : ವಿವಿಧ ವಿಭಾಗದಲ್ಲಿ ಸಾಧನೆ ತೋರಿದ ಪ್ರತಿಭೆಗಳನ್ನು ಗುರುತಿಸಿ ಅವರುಗಳನ್ನು ಕರ್ನಾಟಕದ ಎಲ್ಲೆಡೆ ಪರಿಚಯಿಸುವ ಸಲುವಾಗಿ ಹೊರ ತಂದ ಬಾಗಲಕೋಟೆಯ ಸಾಹಿತಿ ಹಾಗೂ ಶಿಕ್ಷಕರಾದ ಮುತ್ತು ಯ ವಡ್ಡರ ಅವರ “ಎಲೆ ಮರೆ ಕಾಯಿಗಳು” ಸಾಧಕರ ಪರಿಚಯ ಕೃತಿಯಲ್ಲಿ ಕೊಡಗಿನ ನಟಿ, ನಿರ್ಮಾಪಕಿ, ಸಹ ನಿರ್ದೇಶಕಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
“ಎಲೆ ಮರೆ ಕಾಯಿಗಳು” ಕೃತಿಯಲ್ಲಿ ಎಲ್ಲಿಯೂ ಪರಿಚಯವಾಗದ 46 ಮಂದಿ ಸಾಧಕರನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಕೊಡಗಿನ ಈರಮಂಡ ಹರಿಣಿ ವಿಜಯ್ ಅವರ ಪರಿಚಯವನ್ನು ಮಾಡಿಕೊಡಲಾಗಿದೆ.
ಲಯನ್ಸ್ ಕ್ಲಬ್ ಆಫ್ ಮೈಸೂರ್ ಮಿಲೇನಿಯಮ್, ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ, ನಿಸರ್ಗ ಸಂಗೀತ ಮಹಾವಿದ್ಯಾಲಯ ಹನುಮಸಾಗರ ಹಾಗೂ ಮೈಸೂರು ಸಂಜನಾ ಪ್ರತಿಷ್ಠಾನ ಬಳಗದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ನಟರಾಜ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಣಿ ವಿಜಯ್ ಸೇರಿದಂತೆ ಕರ್ನಾಟಕದ ವಿವಿಧೆಡೆಯಿಂದ ಆಗಮಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುತ್ತು ಯ ವಡ್ಡರ ಅವರ ಸಂಪಾದಕತ್ವದ “ಎಲೆ ಮರೆ ಕಾಯಿಗಳು” ಎಂಬ ಸಾಧಕರ ಪುಸ್ತಕ ಹಾಗೂ ಲಯನ್ ಡಾ.ಗಂಗಾಧರಪ್ಪ ನಾರಣಪುರ ಅವರ ‘ಎರೆನಾಡ ಅಂಕುರ’ ಎಂಬ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಹನುಮಸಾಗರದ ಮಲ್ಲಯ್ಯ ಕೋಮಾರಿ ‘ಎಲೆ ಮರಿ ಕಾಯಿಗಳು’ ಕೃತಿ ಹಾಗೂ ಮಲ್ಟಿಪಲ್ ಕೌನ್ಸಿಲ್ ಮಾಜಿ ಅಧ್ಯಕ್ಷ ಲಯನ್ ಡಾ.ನಾಗರಾಜ್ ಬೈರಿ “ಎರೆನಾಡ ಅಂಕುರ” ಕೃತಿಯನ್ನು ಬಿಡುಗಡೆಗೊಳಿಸಿದರು.
ಕೃತಿಯ ಸಂಪಾದಕ ಮುತ್ತು ಯ ವಡ್ಡರ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು.
ಮೈಸೂರು ಮಿಲೆನಿಯಂ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಎ.ಸಿ.ರವಿ, ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಆರಕ್ಷಕ ನಿರೀಕ್ಷಕರಾದ ಎಂ.ಗೀತಾ, ಲಯನ್ಸ್ ಕ್ಲಬ್ ಸೇವಾ ಸಮಿತಿ ಅಧ್ಯಕ್ಷ ಲಯನ್ ಡಾ.ಗಂಗಾಧರಪ್ಪ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಡಾ.ತ್ಯಾಗರಾಜು, ಕೊಡಗು ಓಂ ಬಳಗದ ಸಂಸ್ಥಾಪಕ ಎಂ.ಕೆ.ಜೈ ಕುಮಾರ್, ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆಯ ಜಗದೀಶ್ ಎಸ್.ಕಾಬಾನೆ ಉಪಸ್ಥಿತರಿದ್ದರು.
ಮೈಸೂರು ನೋಟರಿ ವಕೀಲ ಲಯನ್ ಎಸ್.ಸುರೇಶ್ ಬಾಬು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲಿಗೆ ಗದಗದ ಹಳ್ಳಿಕೆರೆ ಮಠದ ಶ್ರೀ ಗವಿ ಸಿದ್ದಯ್ಯ ಅವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು.








