
ಮಡಿಕೇರಿ NEWS DESK ಆ.9 : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ವೀರ ಯೋಧರ ಸ್ಮರಣೆ ಹಾಗೂ ಕಳೆದು ಹೋದ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಸಂಕಲ್ಪದೊಂದಿಗೆ ಮಡಿಕೇರಿ ನಗರದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ ಮತ್ತು ವಾಹನ ಜಾಥಾ ನಡೆಯಿತು. ಶ್ರೀಚೌಡೇಶ್ವರಿ ದೇವಾಲಯದ ಬಳಿಯಿಂದ ಹಿಂದೂಪರ ಕಾರ್ಯಕರ್ತರು ಹಾಗೂ ಬಿಜೆಪಿ ಪ್ರಮುಖರು ಕೇಸರಿ ಧ್ವಜ, ಪಂಜು ಹಿಡಿದು ಸಾಗಿದರು. ಪ್ರಮುಖ ಬೀದಿಯಲ್ಲಿ ಘೋಷಣೆಗಳನ್ನು ಕೂಗಿ ಅಖಂಡ ಭಾರತದ ಸಂಕಲ್ಪ ಮಾಡಿದರು. ಮೆರವಣಿಗೆ ಮಹದೇವಪೇಟೆ, ಇಂದಿರಾಗಾಂಧಿ ವೃತ್ತ, ಹಳೆ ಖಾಸಗಿ ಬಸ್ ನಿಲ್ದಾಣವನ್ನು ಹಾದು ಜನರಲ್ ತಿಮ್ಮಯ್ಯ ವೃತ್ತದವರೆಗೆ ಸಾಗಿ ನಂತರ ಕೊಡವ ಸಮಾಜದಲ್ಲಿ ಸಮಾಪ್ತಿಯಾಯಿತು. ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಖಂಡ ಭಾರತ ಸಂಕಲ್ಪದ ಘೋಷಣೆಗಳನ್ನು ಕೂಗಿದರು. ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂಜಾವೆ ಜಿಲ್ಲಾಧ್ಯಕ್ಷ ಕುಕ್ಕೇರ ಅಜಿತ್, ಪ್ರಮುಖರಾದ ಕುಮಾರ್, ಸುನಿಲ್, ಚೇತನ್, ಚಂದ್ರ, ರಮೇಶ್ ಹೊಳ್ಳ, ಮನು ಮಂಜುನಾಥ್, ಬಿ.ಕೆ.ಜಗದೀಶ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಂಡಿದ್ದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.









