
ಗೋಣಿಕೊಪ್ಪ NEWS DESK ಆ.9 : ರಾಜ್ಯಸಭೆಯಲ್ಲಿ ಕೊಡವ ಹಾಕಿ ನಮ್ಮೆಯ ಕುರಿತು ಪ್ರಸ್ತಾಪಿಸಿ, ಕೊಡವರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಾಜ್ಯಸಭಾ ಸದಸ್ಯ ಅಜಯ್ ಮಾಖೇನ್ ಅವರಿಗೆ ಕೊಡವಾಮೆರ ಕೊಂಡಾಟ ಸಂಘಟನೆ ಕೊಡವ ಜನಾಂಗದ ಪರವಾಗಿ ಅಭಿನಂದನೆ ಸಲ್ಲಿಸಿದೆ. ಈ ಕುರಿತು ಪತ್ರ ಬರೆದಿರುವ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಅಜಯ್ ಮಾಕೇನ್ ಅವರಿಗೆ ಇಮೈಲ್, ಎಕ್ಸ್ ಮತ್ತು ವಾಟ್ಸಾಪ್ ಮೂಲಕ ಧನ್ಯವಾದದ ಸಂದೇಶ ಕಳುಹಿಸಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವ, ಕೊಡವ ಹಾಕಿ ನಮ್ಮೆಗೆ ಕೇಂದ್ರ ಸರ್ಕಾರ ಅನುದಾನ ನೀಡಬೇಕು, ಭಾರತ ಹಾಕಿಗೆ ಕೊಡವ ಜನಾಂಗ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಈ ಸಾಧನೆಯೂ ಕೇಂದ್ರ ಸರ್ಕಾರದ ಯಾವುದೇ ಸಹಾಯ, ಅನುದಾನ ಇಲ್ಲದೆಯೆ ಮಾಡಿರುವ ಹೆಗ್ಗಳಿಕೆಯಾಗಿದೆ. ಕೊಡಗಿನ ಕ್ರೀಡಾ ಸ್ಫೂರ್ತಿಯನ್ನ ಮನಗಂಡು ಸರ್ಕಾರ ತಕ್ಷಣ ಅರುಣಾಚಲದ ಕೂನೂರ್ ಮಾದರಿಯಲ್ಲಿ ಉನ್ನತ ದರ್ಜೆಯ ಕ್ರೀಡಾ ತರಭೇತಿ ಕೇಂದ್ರವನ್ನು ತೆರೆಯಬೇಕೆಂದು ಅಜಯ್ ಮಾಖೇನ್ ಕೇಂದ್ರ ಸರ್ಕಾರವನ್ನ ಒತ್ತಾಯಿಸಿದ್ದರು. ದೆಹಲಿ ಮೂಲದ ಸಂಸದರೊಬ್ಬರು ಪ್ರಪಂಚದ ವಿಶಿಷ್ಟ ಸಂಸ್ಕೃತಿ ಮತ್ತು ಸ್ವಾಭಿಮಾನಿ ಜನಾಂಗವಾದ ಕೊಡವರ ಬಗ್ಗೆ ಹಾಗೂ ಕೊಡವ ಹಾಕಿಯ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಿರುವುದಕ್ಕೆ, ಸಮಸ್ತ ಕೊಡವ ಜನಾಂಗದ ಪರವಾಗಿ ಅಜಯ್ ಮಾಖೇನ್ ಅವರಿಗೆ ಅಭಿನಂದನೆಯ ಜೊತೆಗೆ, ಧನ್ಯವಾದ ತಿಳಿಸಿರುವ ಸಂಘಟನೆ, ಮನವಿಯನ್ನು ಪುರಸ್ಕರಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದೆ.









