
ಮಡಿಕೇರಿ
NEWS DESK ಆ.12
: ಮೀಸಲಾತಿ ವಿಚಾರದ ಹಿನ್ನೆಲೆ ನೆರೆಯ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿಗಳ ಕ್ಷಿಪ್ರಕ್ರಾಂತಿಯ ಬೆನ್ನಲ್ಲೆ ಅಲ್ಲಿನ ಹಿಂದೂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಹಿಂದೂ ಸಂಘಟನೆಗಳ ಪ್ರಮುಖರಾದ ಕೆ.ಹೆಚ್.ಚೇತನ್ ಶಾಂತಿನಿಕೇತನ, ಕುಮಾರ್, ದುರ್ಗೇಶ್, ಚರಣ್, ಪುದಿಯೊಕ್ಕಡ ರಮೇಶ್, ಎಂ.ಧನಂಜಯ, ತಿಮ್ಮಯ್ಯ ಹಾಗೂ ಕಾರ್ಯಕರ್ತರು ‘ಮಾನವ ಸರಪಳಿ’ ರಚಿಸಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪೀಳಿಗೆಗೆ ‘ಮೀಸಲಾತಿ’ ಘೋಷಣೆಯನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿ ಸಮೂಹ ಕ್ಷಿಪ್ರಕ್ರಾಂತಿಯನ್ನು ನಡೆಸಿತು. ಈ ಸಂದರ್ಭ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಧಿಕಾರಕ್ಕೆ ಬಂದ ಪ್ರಧಾನಿ ದೇಶ ಬಿಟ್ಟು ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾದುದಲ್ಲದೆ, ನಿರಂಕುಶ ಆಡಳಿತ ಅಲ್ಲಿ ಕಾಣಿಸಿಕೊಂಡಿದೆ. ಮೀಸಲಾತಿ ಹಿನ್ನೆಲೆಯ ಹೋರಾಟಕ್ಕೆ ಅಮೇರಿಕಾ ಮತ್ತು ನೆರೆಯ ಪಾಕಿಸ್ತಾನಗಳು ಕುಮ್ಮಕ್ಕು ನೀಡಿದ ಬೆನ್ನಲ್ಲೆ, ಇದೀಗ ಭಾರತವನ್ನು ಕೇಂದ್ರೀಕರಿಸಿ, ಅಲ್ಲಿನ ಹಿಂದೂ ಸಮೂಹದ ಮೇಲೆ ನಿರಂತರ ದೌರ್ಜನ್ಯವನ್ನು ನಡೆಸಲಾಗುತ್ತಿದೆ. ಪ್ರಸ್ತುತ ಅಲ್ಲಿನ ಹಿಂದೂ ಸಮೂಹಕ್ಕೆ ಧೈರ್ಯ ತುಂಬುವ ಮತ್ತು ಅವರೊಂದಿಗೆ ನಾವಿದ್ದೇವೆಂದು ಎಂದು ತಿಳಿಸುವ ಅಗತ್ಯತೆ ಭಾರತದ ಮೇಲಿದೆ ಎಂದರು. ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಗಳ ಮುಖಂಡರುಗಳು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರಸಭಾ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಪಕ್ಷದ ಪ್ರಮುಖರಾದ ರಾಬಿನ್ ದೇವಯ್ಯ, ಮನು ಮಂಜುನಾಥ್, ಕವನ್, ನಾಗೇಶ್ ಕುಂದಲ್ಪಾಡಿ, ಬೀನಾ ಬೊಳ್ಳಮ್ಮ, ಜಿ.ಎಂ.ಸತೀಶ್ ಪೈ, ಬೊಳ್ಳಜಿರ ಬಿ.ಅಯ್ಯಪ್ಪ, ಎಸ್.ಸಿ.ಸತೀಶ್, ಅಪ್ಪಣ್ಣ, ರಮೇಶ್ ಹೊಳ್ಳ ಸೇರಿದಂತೆ ಹಲ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


