ಮಡಿಕೇರಿ ಆ.29 NEWS DESK : ಜನರಿಂದ ಬಹುಮತ ಪಡೆದು ಆಯ್ಕೆಯಾದ ಚುನಾಯಿತ ಕರ್ನಾಟಕ ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಸ್ಟ್ ಪಕ್ಷ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಿಪಿಐ ಪ್ರಮುಖರು ರಾಜ್ಯಪಾಲರ ಹುದ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಿಪಿಐ ಉಪ ಕಾರ್ಯದರ್ಶಿ ಹೆಚ್.ಎಂ.ಸೋಮಪ್ಪ ಅವರು, ರಾಜ್ಯಪಾಲರ ಹುದ್ದೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಆಸ್ಥಿರಗೊಳಿಸಲು ರಾಜಕೀಯವಾಗಿ ದುರ್ಬಳಕೆಯಾಗುತ್ತಿದೆ. ರಾಜ್ಯದ ಈ ಹಿಂದಿನ ಹಲವು ಭಷ್ಟಾಚಾರ ಪ್ರಕರಣಗಳ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿ ತನಿಖೆಗೆ ಅನುಮತಿ ನೀಡುವಂತೆ ಕೋರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಒಬ್ಬ ವ್ಯಕ್ತಿ ನೀಡಿದ ದೂರನ್ನಾಧರಿಸಿ ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದನ್ನು ಗಮನಿಸಿದರೆ ರಾಜ್ಯಪಾಲರ ನಿರ್ಧಾರ ರಾಜಕೀಯ ಪ್ರೇರಿತವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.ಮೂಡ ನಿವೇಶನ ಹಂಚಿಕೆ ಪ್ರಕರಣ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣಗಳ ಕುರಿತು ನ್ಯಾಯಾಂಗದ ಚೌಕಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯಪಾಲರು ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಆಳುವ ಪಕ್ಷದ ರಾಜಕೀಯ ಪ್ರತಿನಿಧಿಯಂತೆಯೇ ನಡೆದುಕೊಂಡಿದ್ದಾರೆ. ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಕೇವಲ ರಾಷ್ಟ್ರಪತಿಗಳಿಂದ ನೇಮಿಸಲ್ಪಟ್ಟ ಸೀಮಿತ ಅಧಿಕಾರ ಹೊಂದಿದ್ದರೂ ಸಹ ರಾಜ್ಯಪಾಲರು ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷದ ಹಿತಾಸಕ್ತಿ, ನಿರ್ದೇಶನಕ್ಕನುಗುಣವಾಗಿಯೇ ಕೆಲಸ ಮಾಡುತ್ತಾರೆ. ಭಾರತದ ಪ್ರಜಾಸತ್ತೆಯ ಇತಿಹಾಸವನ್ನು ಗಮನಿಸಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಒಂದು ಪಕ್ಷದ ಸರ್ಕಾರವು ತನಗಾಗದೇ ಇರುವ ರಾಜ್ಯದಲ್ಲಿ ಆಡಳಿತ ನಡೆಸುವ ಮತ್ತೊಂದು ಪಕ್ಷದ ಸರ್ಕಾರಗಳನ್ನು ವಜಾಗೊಳಿಸಿರುವ ಉದಾಹರಣೆಗಳು 1952ರಿಂದಲೂ ನಡೆದು ಬಂದಿದೆ. ಎಂದು ಹೆಚ್.ಎಂ.ಸೋಮಪ್ಪ ಟೀಕಿಸಿದರು.
::: ನಿವೇಶನ ನೀಡಲು ಒತ್ತಾಯ :::
ಇದೇ ಸಂದರ್ಭ ಪ್ರತಿಭಟನಾಕಾರರು ಕಳೆದ ಹಲವು ವರ್ಷಗಳಿಂದ ಕಾಫಿ ತೋಟದ ಲೈನ್‍ಮನೆ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದರು.
ಸಿಪಿಐ ಸೋಮವಾರಪೇಟೆ ತಾಲ್ಲೂಕು ಕಾರ್ಯದರ್ಶಿ ಶಬಾನ, ಕಟ್ಟಡ ಕಾರ್ಮಿಕರ ಸಂಘದ ಕಾರ್ಯದರ್ಶಿ ಕೃಷ್ಣ, ಎಐಟಿಯುಸಿ ಸಂಚಾಲಕ ಶೇಷಪ್ಪ, ಸದಸ್ಯರಾದ ಪರಮೇಶ್ವರ್, ರಮೇಶ್, ಅಣ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








