
ಮಡಿಕೇರಿ ಸೆ.13 NEWS DESK : ಕೊಡಗಿನ ಆರ್ಥಿಕ ಆಧಾರ ಸ್ತಂಭವಾಗಿರುವ ಕಾಫಿ ಕೃಷಿಯ ಸಂಕಷ್ಟಗಳನ್ನು ಅರಿತು ಸರ್ಕಾರ ಸೂಕ್ತ ಸ್ಪಂದನೆ ನೀಡಬೇಕು. ಸಿ ಮತ್ತು ಡಿ ಜಮೀನನ್ನು ಅರಣ್ಯವೆಂದು ಘೋಷಿಸಬಾರದು ಹಾಗೂ ಬಡವರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ಕಾಫಿ ರೈತರ ಸಂಘದ ಕೊಡಗು ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಂಘದ ಕೊಡಗು ಘಟಕದ ಸಂಚಾಲಕ ಕೆ.ಹೆಚ್.ಹನೀಫ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ಪದಾಧಿಕಾರಿ ಡಾ.ಇ.ರ.ದುರ್ಗಾಪ್ರಸಾದ್ ಅವರು ಮಾತನಾಡಿ, ಕಾಫಿ ಬೆಳೆಗಾರರ ಪ್ರಮುಖ ಆರು ಬೇಡಿಕೆಗಳನ್ನು ಮುಂದಿಟ್ಟುಕೊAಡು ಸರ್ಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಹೋರಾಟವನ್ನು ರೂಪಿಸಲಾಗಿದೆ. ಇದಕ್ಕೆ ಸರ್ಕಾರ ಸೂಕ್ತ ಸ್ಪಂದನ ನೀಡದಿದ್ದಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಅತಿವೃಷ್ಟಿಯಿಂದ ಜಿಲ್ಲೆಯ ಕಾಫಿ, ಕರಿಮೆಣಸು, ಭತ್ತ, ಅಡಿಕೆ, ಏಲಕ್ಕಿ ಕೃಷಿಗೆ ಅಪಾರ ಹಾನಿ ಸಂಭವಿಸಿದೆ. ಇದರಿಂದ ಇದನ್ನೆ ನಂಬಿರುವ ಸಣ್ಣ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಇಂತಹ ಬೆಳೆ ಹಾನಿಗೆ ಅತ್ಯಂತ ಕನಿಷ್ಟ ಪ್ರಮಾಣದ ಪರಿಹಾರ ನೀಡಲಾಗುತ್ತಿದ್ದು, ಸರ್ಕಾರ ಬೆಳೆಗಾರರಿಗೆ ಯೋಗ್ಯ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.
ಕಾಫಿ ಬೆಳೆÉಯುವ ಬೆಳೆಗಾರರೆಲ್ಲರಿಗೂ ಪ್ರಸ್ತುತ ಉತ್ತಮ ಧಾರಣೆ ಲಭ್ಯವಾಗುತ್ತಿದೆ ಎನ್ನುವ ಭಾವನೆ ಇದೆ. ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಇರುವ ಉತ್ತಮ ಧಾರಣೆ ಸ್ಥಳೀಯ ಬೆಳೆಗಾರಿಗೆ ಲಭ್ಯವಾಗುತ್ತಿಲ್ಲ, ಬಹುತೇಕ ಲಾಭವನ್ನು ವರ್ತಕರು ಮತ್ತು ಮಧ್ಯವರ್ತಿಗಳು ಪಡೆಯುತ್ತಿದ್ದಾರೆ. ಬೆಳೆಗಾರರನ್ನು ಅವರಿಗೆ ಆಗುತ್ತಿರುವ ಅನ್ಯಾಯದಿಂದ ರಕ್ಷಿಸಬೇಕು. ಪ್ರಸ್ತುತ ಕಾಫಿ, ಅಡಿಕೆ ಹೊರ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಳ್ಳ ಸಾಗಣೆಯಾಗುತ್ತಿದ್ದು, ಇದನ್ನು ತಡೆಯಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ಕಾಫಿ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕಾಫಿ ಫಸಲನ್ನು ರಕ್ಷಿಸಕೊಳ್ಳಲಾಗದ ಪರಿಸ್ಥಿತಿಯ ಜೊತೆಯಲ್ಲೆ ಜೀವಹಾನಿಯ ಘಟನೆಗಳು ನಡೆಯುತ್ತಿದೆ. ಇದರಿಂದ ಬೆಳೆಗಾರಿಗೆ ಸೂಕ್ತ ರಕ್ಷಣೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ರೈತರ ಸ್ವಾಧೀನದಲ್ಲಿದ್ದು, ಅದರಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ಸಿ ಮತ್ತು ಡಿ ದರ್ಜೆಯ ಜಮೀನನ್ನು ಅರಣ್ಯವೆಂದು ಏಕ ಪಕ್ಷೀಯವಾಗಿ ಘೋಷಿಸಿ ಅದನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಯೋಜನೆಯನ್ನು ಕೈಬಿಡಬೇಕು, ಸರಕಾರಿ ಜಾಗಗಳಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ಬಡ ರೈತರಿಗೆ ಐದು ಎಕರೆ ಜಾಗವನ್ನು ಅವರಿಗೆ ನೀಡುವುದರೊಂದಿಗೆ ಆರ್‌ಟಿಸಿಯನ್ನು ಒದಗಿಸುವಂತೆ ಡಾ.ಇ.ರ.ದುರ್ಗಾಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದರು.
ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಸಂಘದ ಪ್ರಮುಖರಾದ ವಸಂತ ಕುಮಾರ್ ಹೊಸಮನೆ, ನೆಲ್ಲಿಹುದಿಕೇರಿಯ ಉದಯ ಕುಮಾರ್, ಚಿಟ್ಟಡ ಹಮೀದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








