
ನಾಪೋಕ್ಲು ಸೆ.13 NEWS DESK : ಇಂಗ್ಲಿಷ್ ಉದ್ಯೋಗದ ಭಾಷೆ ಆದರೂ ಭಾವಾ ಅಭಿವ್ಯಕ್ತಿಗೆ ಹೃದ್ಯವಾದುದು ಮಾತೃಭಾಷೆ ಕನ್ನಡ ಎಂದು ಡಾ.ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಬೇಟೋಳಿ ಗ್ರಾಮದ ಗುಂಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಎನ್.ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡದ ಏಳು ಬೀಳುಗಳ ಸಮೀಕ್ಷೆ” ಬಗ್ಗೆ ಉಪನ್ಯಾಸ ನೀಡಿದರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ.ಬಸವರಾಜ್ ಮಾತನಾಡಿ, ಪಂಪ ರನ್ನ ಪೊನ್ನರು ರಚಿಸಿದ ಕಾವ್ಯಗಳು ಇಂದಿಗೂ ಜೀವಂತ ಸಾರ್ವಕಾಲಿಕ ಸಂದೇಶ ನೀಡುತ್ತವೆ. ವಚನ ಸಾಹಿತ್ಯವು ವಿಶ್ವ ಮಾನ್ಯವಾಗಿದ್ದು, ಸಾರ್ವತ್ರಿಕವಾಗಿ ಜನಮನ ಸೆಳಿದಿದೆ. ಭಕ್ತಿ ರಸ ಚೆಲ್ಲಿದ ದಾಸ ಸಾಹಿತ್ಯದ ಕೀರ್ತನೆಗಳು ಎಂದೆಂದೂ ಜನಪ್ರಿಯ ಆಗಿವೆ. ಇಷ್ಟೆಲ್ಲಾ ಶ್ರೀಮಂತಿಕೆ ಸತ್ವ ಇರುವ ಭಾಷೆಯು ಇಂದು ಅಭಿಮಾನ ಶೂನ್ಯತೆಯಿಂದ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡ ಭಾಷೆಯು ಇಂಗ್ಲಿಷ್ ಹಿಂದಿ ಭಾಷೆ ಗಳಿಂದಾಗಿ ನಲುಗುತ್ತಿದೆ. ಕನ್ನಡದ ಏಳು ಬೀಳು ಕುರಿತು ಮಾತನಾಡಿ ಇಂಗ್ಲಿಷ್ ಭಾಷೆಯ ಅವಾಂತರ ಹಾಗೂ ಜನಪದ ಭಾಷೆಯ ಸೊಗಡುಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೀತಲತಂಡ ಇಸ್ಮಾಯಿಲ್ ಮಾತನಾಡಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕಾದ ನಾವು ಬೇರೆ ಭಾಷೆಗಳಿಗೆ ಆಸಕ್ತಿಯನ್ನು ತೋರಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಕೇರಳ ರಾಜ್ಯದಲ್ಲಿ ಮೊಬೈಲ್ ಸಂಖ್ಯೆ ಕೇಳಿದರೆ ಅವರು ಮಾಳಿಯಾಳಾಂ ಭಾಷೆಯಲ್ಲಿ ಹೇಳುತ್ತಾರೆ. ನಮ್ಮ ರಾಜ್ಯದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಹೇಳುತ್ತಾರೆ. ನಾವು ನಮ್ಮ ಮಾತೃ ಭಾಷೆಯನ್ನು ಮಾತನಾಡುವ ಮೂಲಕ ಕನ್ನಡವನ್ನು ಬೆಳೆಸಬಹುದು ಎಂದು ತಿಳಿಸಿದರು. ಬೇಟೋಳಿ ಗ್ರಾ.ಪಂ ಸದಸ್ಯ ಎಂ.ಎಂ.ರಜಾಕ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಕಾರ್ಯಕ್ರಮ ನೀಡಿ ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಮೂಡುವಂತೆ ಮಾಡಿದೆ ಎಂದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ತಮ್ಮ ಅಧ್ಯಕ್ಷರ ಭಾಷಣ ಮಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹೆಚ್.ಜಿ.ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೀತಾ ಹಾಗೂ ಶಾಲೆಯ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.








