
ನಾಪೋಕ್ಲು ಸೆ.13 NEWS DESK : ಗೌರಿ-ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಕಕ್ಕುಂದ ಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ವತಿಯಿಂದ 19ನೇ ವರ್ಷದ ಅದ್ಧೂರಿ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಮಹಾ ಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಗದಗದ ಮಹಿಳಾ ತಂಡದಿಂದ ಡೊಳ್ಳು ಕುಣಿತ, ಉಡುಪಿಯ ಕೀಲು ಗೊಂಬೆಗಳು ಸೇರಿದಂತೆ ಇತರ ಕಲಾತಂಡದೊಂದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪ ದೊಂದಿಗೆ ಸಾಗಿದ ಮೆರವಣಿಗೆಯಲ್ಲಿ, ಕಲಾತಂಡಗಳ ನೃತ್ಯ ಜನಮನ ರಂಜಿಸಿತು. ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 19ನೇ ವರ್ಷದ ದ್ಧೂರಿ ಗೌರಿ ಗಣೇಶ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ರವಿ ಬಳಗದಿಂದ ಸಂಗೀತ ಸಂಜೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಜೆ ಅತ್ಯಾಕರ್ಷಕ ಕೇರಳದ ಕೊಯ್ಕೋಡ್ ನ ಲೈಟಿಂಗ್ಸ್ ವೇಷಭೂಷಣ ತೊಟ್ಟ ದೇವಕನ್ಯೆಯರಿಂದ ನೃತ್ಯ, ಶಬರಿಮಲೆ ಅಯ್ಯಪ್ಪನ ಬೃಹತ್ ಆಕಾರದ ಪ್ರತಿರೂಪ ದೊಂದಿಗೆ ಆಕರ್ಷಕ ಮಂಟಪಗಳು ಕಂಗೊಳಿಸುತ್ತಿತ್ತು. ಹಳೆತಾಲೂಕು ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 15ನೇ ವರ್ಷದ ಅದ್ಧೂರಿ ಗೌರಿ ಗಣೇಶ ಉತ್ಸವದಲ್ಲಿ ಮಡಿಕೇರಿಯ ಇವೆಂಟ್ಸ್ ತಂಡದವರಿಂದ ಚಲಿಸುವ ಬೃಹತ್ ಗಾತ್ರದ ದೇವತೆಗಳ, ರಾಕ್ಷಸರ ಪ್ರತಿರೂಪ, ಗಣೇಶನ ಕಥಾವಸ್ತು ಹಾಗೂ ಬೆಂಗಳೂರಿನ ಪಿಎಸ್ಎಲ್ ಅವರಿಂದ ಆಕರ್ಷಕ ಲೈಟಿಂಗ್ ಸೌಂಡ್ಸ್ ಪ್ರದರ್ಶನ, ಸಿಡಿಮದ್ದು ಪ್ರದರ್ಶನ ಸಾರ್ವಜನಿಕರನ್ನು ರೋಮಾಂಚನಗೊಳಿಸಿತು. ನಾಪೋಕ್ಲುನಾಡು ಗೌರಿಗಣೇಶ ಸಮಿತಿ ವತಿಯಿಂದ ಹಳೆತಾಲೂಕಿನ ಭಗವತಿದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶನ ಮಂಟಪ ಹಾಗೂ ಶ್ರೀ ರಾಮ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಯ ಮಂಟಪಗಳೂ ವಿಶೇಷ ಆಕರ್ಷಣೆ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ವಿವಿಧ ಸೇವಾ ಸಮಿತಿಗಳು ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿಗಳನ್ನು ಆಕರ್ಷಕ ಕಾಲ ತಂಡಗಳ ವೇಷ ಭೂಷಣ ನೃತ್ಯದ ಜೊತೆ ಸಾರ್ವಜನಿಕರು ಕುಣಿದು ಕುಪ್ಪಲಿಸುವುದರೊಂದಿಗೆ ಅಲಂಕೃತ ವಾಹನಗಳಲ್ಲಿ ಗಣೇಶನ ಮೂರ್ತಿಯನ್ನು ಕೊಂಡೊಯ್ದು ಕಾವೇರಿನದಿಯಲ್ಲಿ ವಿಸರ್ಜಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಸೇವಾ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಸಿಬ್ಬಂದಿಗಳು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಇಲಾಖೆ ವತಿಯಿಂದ ಡಿಎಸ್ಪಿ ಮಹೇಶ್ ಕುಮಾರ್, ವೃತ ನಿರೀಕ್ಷಕ ಅನುಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿಗಳಿಂದ ವಿಶೇಷ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ : ದುಗ್ಗಳ ಸದಾನಂದ.









