
ಮಡಿಕೇರಿ ಸೆ.13 NEWS DESK : ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ. ದ.ಸಂ.ಸ.ಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವೆಂಕಟರಾಜಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಗಾಯತ್ರಿ ನರಸಿಂಹ, ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನಬದ್ಧವಾದ ಅಧಿಕಾರ ಇದೆ ಮತ್ತು ಈ ಆದೇಶವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ನ್ಯಾಯಾಲಯವೇ ಐತಿಹಾಸಿಕ ತೀರ್ಪು ನೀಡಿದೆ. ಇದು ಕಳೆದ 30 ವರ್ಷಗಳಿಂದ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದರು. ಪರಿಶಿಷ್ಟ ಜಾತಿಯ ಕೆಲವು ಉಪಜಾತಿಗಳಿಗೆ ಮೀಸಲಾತಿಯ ಪ್ರಯೋಜವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಉಪಜಾತಿಗಳು ಪ್ರಗತಿ ಸಾಧಿಸದೆ ಹಿಂದುಳಿದಿವೆ. ಇದನ್ನು ಪರಿಗಣಿಸಿ ಮೀಸಲಾತಿ ನೀಡಿದರೆ ಮೀಸಲಾತಿಯ ಲಾಭ ಪಡೆಯಲು ಸಾಧ್ಯವಾಗದ ಸಮುದಾಯಗಳಿಗೆ ಪ್ರಯೋಜವಾಗಬಹುದು ಎಂದು ಅಭಿಪ್ರಾಯಪಟ್ಟರು. ಒಳ ಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಕೋರ್ಟ್ ತೆರೆ ಎಳೆದಿದ್ದು, ಆದೇಶ ಹೊರ ಬಿದ್ದು ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸಿಲ್ಲ ಎಂದು ಆರೋಪಿಸಿದರು. ಸರ್ಕಾರ ಆದೇಶವನ್ನು ತಕ್ಷಣ ಜಾರಿಗೆ ತರಬೇಕು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ.ಕೃಷ್ಣ ಅವರ ಜನ್ಮ ದಿನ ಜೂ.9ನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು, ಕೃಷ್ಣಪ್ಪ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು, ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು, ಒಳಮೀಸಲಾತಿ ಜಾರಿಯಾಗುವವರೆಗೆ ಸರ್ಕಾರದ ಎಲ್ಲಾ ಹೊಸ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು, ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು, ಅರಣ್ಯ ಭೂಮಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿರುವ ಕೃಷಿ ಕಾರ್ಮಿಕರಿಗೆ ಪರ್ಯಾಯ ಭೂಮಿ ನೀಡಬೇಕು, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಯಲ ಮತ್ತು ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು, ಕೊಡಗು ಜಿಲ್ಲೆಯಾದ್ಯಂತ ಲೈನ್‍ಮನೆಯಲ್ಲಿ ವಾಸವಿರುವ ಮೂಲ ನಿವಾಸಿಗಳನ್ನು ಜೀತ ವಿಮುಕ್ತರನ್ನಾಗಿಸಿ ಪುನರ್ ವಸತಿ ಕಲ್ಪಿಸಬೇಕು, ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗಾಯತ್ರಿ ನರಸಿಂಹ ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭ ಜಿಲ್ಲಾ ಸಂಘಟನಾ ಸಂಚಾಲಕ ಪಿ.ಬೋಜ, ಜಿಲ್ಲಾ ಸಮಿತಿ ಸದಸ್ಯ ಕುಳಿಯ, ಜಿಲ್ಲಾ ಸಂಘಟನಾ ಸಂಚಾಲಕಿ ಭಾನುಮತಿ, ಮಹಿಳಾ ಒಕ್ಕೂಟದ ಮಡಿಕೇರಿ ತಾಲ್ಲೂಕು ಸಂಚಾಲಕಿ ಗೌರಮ್ಮ, ವಿರಾಜಪೇಟೆ ತಾಲ್ಲೂಕು ಸಂಚಾಲಕಿ ಮಂಜುಳಾ, ಕೆದಮಳ್ಳೂರು ಗ್ರಾಮ ಸಂಚಾಲಕ ರಘು, ಹಿರಿಯ ದಲಿತ ಮುಖಂಡರು ಹಾಗೂ ಸದಸ್ಯರಾದ ಗೋವಿಂದರಾಜ್ ದಾಸ್, ದಿನೇಶ್, ಗಂಗೆ ಮತ್ತಿತರರು ಹಾಜರಿದ್ದರು.









