
ಮಡಿಕೇರಿ ಸೆ.17 NEWS DESK : ದಲಿತ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ಭಾಷಾ ಬೋಧಕರಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಸಮಾರಂಭವು ಸೆ.22 ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ದಸಾಪ ಅಧ್ಯಕ್ಷ ಅರ್ಜುನ್ ಮೌರ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನಗರದ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಅರ್ಜುನ್ ಗೋಳಸಂಗಿ ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಯಲದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು “ಕನ್ನಡ ಸಾಹಿತ್ಯದಲ್ಲಿ ಪರಿವರ್ತನೆಯ ಹೆಗ್ಗುರುತುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು. ವಿಶೇಷ ಆಹ್ವಾನಿತರಾಗಿ ದಸಾಪ ಮೈಸೂರು ವಿಭಾಗೀಯ ಸಂಯೋಜಕ ಡಾ.ಚಂದ್ರಗುಪ್ತ, ಮಡಿಕೇರಿ ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಪರಿವರ್ತನಾ ಚಳುವಳಿ ಮೋಹನ್ ಮೌರ್ಯ ಸೇರಿದಂತೆ ಕೊಡಗಿನ ವಿವಿಧ ಕ್ಷೇತ್ರದ ಸಂಘಟಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಈಗಾಗಲೇ ಕೊಡಗು ವಿವಿ, ಶಾಲಾ ಶಿಕ್ಷಣ ಉಪನಿರ್ದೇಶಕರು, ಪ.ಪೂ.ಶಿಕ್ಷಣ ಉಪನಿರ್ದೇಶಕರಿಂದ ಕಾರ್ಯಕ್ರಮಕ್ಕೆ ಸಹಕಾರ ದೊರೆತ್ತಿದ್ದು, ಈ ಬಗ್ಗೆ ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಕೂಡ ಕಳುಹಿಸಿಕೊಡಲಾಗಿದೆ. ಅಲ್ಲದೇ ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಕೊಡಗಿನ ಎಲ್ಲಾ ಕನ್ನಡ ಭಾಷಾ ಬೋಧಕರಿಗೆ ಹಾಗೂ ಇತರರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದೆಂದರು. ಈಗಾಗಲೇ ಗೂಗಲ್ ಫಾರಮ್ ಮೂಲಕ 42 ಭಾಷಾಭಿಮಾನಿಗಳು ನೊಂದಾಯಿಸಿಕೊಂಡಿದ್ದು, ಕಾರ್ಯಕ್ರಮದ ದಿನ ಬೆಳಿಗ್ಗೆ 9.30 ಗಂಟೆಯಿಂದ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ಕೂಡ ಅವಕಾಶವಿದೆ. ಭಾಗವಹಿಸುವವರಿಗೆ ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ ಎಂದು ಅರ್ಜುನ್ ಮೌರ್ಯ ತಿಳಿಸಿದರು. ದಲಿತ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ ಯಾವುದೇ ಜಾತಿ, ವರ್ಗಕ್ಕೆ ಮಿಸಲಾಗದೆ ದಲಿತ ಬಂಡಾಯಕ್ಕೆ ಸೇರಿದ, ವಚನ ಸಾಹಿತ್ಯದ ಕುರಿತು ಕ್ರೀಯಾಶೀಲ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜಿಲ್ಲೆಯ ಕನ್ನಡ ಬೋಧಕ ವರ್ಗ ಹಾಗೂ ಭಾಷಾಭಿಮಾನಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ 9448600644, 9449933238 ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಘಟಕದ ನಿರ್ದೇಶಕ ಜಯಪ್ಪ ಹಾನಗಲ್, ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕೆ.ಜಿ.ರಮ್ಯ, ಕುಶಾಲನಗರ ತಾಲ್ಲೂಕು ಅಧ್ಯಕ್ಷೆ ಅಲುಮೇಲು ವಿನೋದ್ ಉಪಸ್ಥಿತರಿದ್ದರು.








