
ಸೋಮವಾರಪೇಟೆ ಡಿ.3 NEWS DESK : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ಮಹಿಳೆಯರು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಿಸಿದರು. ನ್ಯಾಷನಲ್ ರೂರಲ್ ಲವ್ಲಿಹುಡ್ ಮಿಷನ್(ಎನ್‍ಆರ್‍ಎಲ್‍ಎಂ)ಯೋಜನೆಯಡಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಲ್ಲಳ್ಳಿ ಜಲಪಾತದ ಸಮೀಪ ನಿರ್ಮಾಣವಾಗಿರುವ ಮತ್ಸ್ಯ ಸಂಜೀವಿನಿ ಫಿಶ್ ಕ್ಯಾಂಟಿನ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಂಜೀವಿನಿ ಒಕ್ಕೂಟದ ಸಂಘದ ಮೂಲಕವೇ ಕ್ಯಾಂಟಿನ್ ನಡೆಯಲಿದೆ. ಪ್ರವಾಸಿಗರಿಗೆ ರುಚಿಯಾದ, ಗುಣಮಟ್ಟದ ಆಹಾರವನ್ನು ಕಲ್ಪಿಸುವುದು ಸ್ವಸಹಾಯ ಸಂಘದವರ ಜವಾಬ್ದಾರಿಯಾಗಿದೆ. ಮೀನುಗಾರಿಕೆ ಇಲಾಖೆಯ ವತಿಯಿಂದ ಹಾರಂಗಿ ಹಿನ್ನಿರಿನಲ್ಲಿ ಬೆಳೆದಿರುವ ತಾಜಾ ಮೀನನ್ನು ಕಡಿಮೆ ದರದಲ್ಲಿ ನೀಡಲಾಗುತ್ತದೆ. ಅದರ ಜೊತೆಯಲ್ಲಿ ಕೋಳಿ ಮಾಂಸಾಹಾರವನ್ನು ಮಾಡಲು ಅವಕಾಶವಿದೆ ಎಂದು ಹೇಳಿದರು. ಜಲಪಾತಕ್ಕೆ ಬಂದ ಪ್ರವಾಸಿಗರಿಗೆ ಇಲ್ಲಿ ಊಟ ಸಿಗುತ್ತಿರಲಿಲ್ಲ. ಇನ್ನು ಸಮಸ್ಯೆಯಾಗುವುದಿಲ್ಲ. ಪ್ರವಾಸಿಗರೊಂದಿಗೆ ಆತ್ಮಿಯತೆಯಿಂದ ಮಾತನಾಡಬೇಕು ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕಾಗಿದೆ. ಅದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಲಾಗುವುದು. ಪ್ರವಾಸೋದ್ಯಮ ಬೆಳೆದರೆ ಗ್ರಾಮೀಣ ಜನರಿಗೂ ಉಪಯೋಗವಾಗಲಿದೆ ಎಂದರು.
ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆ :: ಮಲ್ಲಳ್ಳಿ ಗ್ರಾಮಕ್ಕೆ 1 ಕಿ.ಮೀ ರಸ್ತೆ ಮಾಡುವುದು ನನ್ನ ಮೊದಲ ಅದ್ಯತೆ ಎಂದು ಗ್ರಾಮಸ್ಥರಿಗೆ ಡಾ.ಮಂತರ್‍ಗೌಡ ಭರವಸೆ ನೀಡಿದರು. ಮಳೆಹಾನಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 8ಲಕ್ಷ ಬಿಡುಗಡೆಯಾಗಿದೆ. ಮಲೆನಾಡ ಅಭಿವೃದ್ಧಿ ಯೋಜನೆಯಡಿ 25ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇರೆ ಬೇರೆ ಇಲಾಖೆಗಳ ಯೋಜನೆಯ ಅನುದಾನವನ್ನು ಕ್ರೋಡಿಕರಿಸಿ, ಮಲ್ಲಳ್ಳಿ ರಸ್ತೆ ಮಾಡಲಾಗುವುದು. ಗ್ರಾಮಸ್ಥರ ರಸ್ತೆ ಕನಸ್ಸನ್ನು ನನಸ್ಸು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ಮಾತನಾಡಿ, ಶಾಸಕರ ಪ್ರಯತ್ನದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಮಲ್ಲಳ್ಳಿ ಜಲಪಾತದ ಸಮೀಪ ಫಿಶ್ ಕ್ಯಾಂಟಿನ್ ಉದ್ಘಾಟನೆಗೊಂಡಿದೆ. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಇದೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಬಹುದು ಎಂದು ಹೇಳಿದರು. ವೇದಿಕೆಯಲ್ಲಿ ಬೆಟ್ಟದಳ್ಳಿ ಗ್ರಾ.ಪಂ ಅಧ್ಯಕ್ಷ ಕೆ.ಜಿ.ತಮ್ಮಯ್ಯ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಾವೇರಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್, ಪಂಚಾಯಿತಿ ಪಿಡಿಒ ರವಿ ನಾಯರ್ ಪ್ರಮುಖರಾದ ಬಿ.ಬಿ.ಸತೀಶ್, ನಾಪಂಡ ಮುತ್ತಪ್ಪ, ಎಚ್.ಆರ್.ಸುರೇಶ್, ಕಿರಣ್ ಉದಯ್‍ಶಂಕರ್, ಚೇತನ್ ಮತ್ತಿತರರು ಇದ್ದರು.









