
ಮಡಿಕೇರಿ NEWS DESK ಡಿ.11 : ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಡಿ.12 ರಂದು ಕರೆ ನೀಡಿರುವ ಆರು ಗಂಟೆಗಳ ಕೊಡಗು ಬಂದ್ ಗೆ ನಾಪೋಕ್ಲು ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಎಂ.ಸಿ.ನಾಣಯ್ಯ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತ ಕಂಡ ಅಪ್ರತಿಮ ಸೇನಾಧಿಕಾರಿಗಳಾದ ಕೊಡಗಿನ ಹೆಮ್ಮೆಯ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ತಕ್ಷಣ ಗಡಿಪಾರು ಮಾಡಬೇಕು ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಗುರುವಾರ ಬೆಳಿಗ್ಗೆ 6 ಗಂಟೆಯಿ0ದ ಮಧ್ಯಾಹ್ನ 12 ಗಂಟೆಯವರೆಗಿನ ಕೊಡಗು ಬಂದ್ ಗೆ ಕೊಡಗಿನ ಸರ್ವ ಜನರು ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ. ಶಿಸ್ತು, ದಕ್ಷತೆ ಮತ್ತು ದೇಶಭಕ್ತಿಯ ಇಬ್ಬರು ವೀರಸೇನಾನಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ದೇಶದ ಜನರಿಗೆ ಮಾಡಿರುವ ದೊಡ್ಡ ಅಪಮಾನವಾಗಿದೆ. ಆದ್ದರಿಂದ ತಪ್ಪು ಮಾಡಿದ ಕಿಡಿಗೇಡಿಯ ಮೇಲೆ ಯಾವುದೇ ರೀತಿಯಲ್ಲಿ ಅನುಕಂಪ ತೋರದೆ ದೇಶದ್ರೋಹದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಡಿಪಾರು ಮಾಡಲು ಗೃಹ ಇಲಾಖೆ ಮುಂದಾಗಬೇಕು ಎಂದು ಎಂ.ಸಿ.ನಾಣಯ್ಯ ಆಗ್ರಹಿಸಿದ್ದಾರೆ.








