
ಸೋಮವಾರಪೇಟೆ ಡಿ.13 NEWS DESK : ಮಕ್ಕಳಿಗೆ ಸಂಸ್ಕಾರ ನೀಡಿ, ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದು ಬಸವಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ತಿಳಿಸಿದರು. ಸೋಮವಾರಪೇಟೆಯ ಕರ್ಕಳ್ಳಿಯಲ್ಲಿರುವ ಅಕ್ಕನ ಬಳಗದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿ ಮಾತನಾಡಿದರು. ಇಂದು ಮಕ್ಕಳಿಗೆ ಸಂಸ್ಕಾರದ ಅಗತ್ಯವಿದೆ. ತಾಯಂದಿರು ಜವಾಬ್ದಾರಿ ತೆಗೆದುಕೊಳ್ಳಬೇಕು, ಆಧುನಿಕತೆ ಬೆಳೆದಂತೆ ಆದ್ಯಾತ್ಮ, ಸಂಸ್ಕಾರ ಮರೆಯಾಗುತ್ತಿದೆ ಎಂದರು. ಮಾಸಿಕ ಪೂಜೆಯ ದಿನ ಎಲ್ಲಾ ತಾಯಂದಿರು ತಮ್ಮ ಮಕ್ಕಳೊಂದಿಗೆ ವಚನಗಳ ಅಭ್ಯಾಸ, ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿ ಆ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿ ಹಾಗೂ ಸಮಾಜದಲ್ಲಿ ಅಕ್ಕಮಹಾದೇವಿ ಮತ್ತು ವಚನಕಾರರ ಬಗ್ಗೆ ಅರಿವು ಮೂಡಿಸುವ ಕೆಲಸವಾಗಲಿ ಎಂದು ತಿಳಿಸಿದರು. ಬೆಂಗಳೂರಿನ ಸ್ತ್ರೀರೋಗ ತಜ್ಞ ವೈದ್ಯರಾದ, ಡಾ.ಬಿ.ಎಂ.ಲತಾ ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದ ಅಡುಗೆ ಪಾತ್ರೆಗಳನ್ನು ತಪೂಕ್ಷೇತ್ರ ಮನೆಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಅಕ್ಕನ ಬಳಗಕ್ಕೆ ಹಸ್ತಾಂತರಿಸಿ ಆಶೀರ್ವದಿಸಿದರು. ಈ ಸಂದರ್ಭ ಅಕ್ಕನ ಬಳಗದ ಅಧ್ಯಕ್ಷೆ ಗೀತಾರಾಜು, ವೀರಶೈವ ಲಿಂಗಾಯತ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಜಯಣ್ಣ ಅಕ್ಕನ ಬಳಗದ ಉಪಾಧ್ಯಕ್ಷೆ ಸರಿತಾ ಮಲ್ಲಿಕಾರ್ಜುನ, ಖಜಾಂಚಿ ಆಶಾ ಹೂವಯ್ಯ, ನಿರ್ದೇಶಕರುಗಳಾದ ಜಗದಾಂಬ, ರಜಿನಿ, ಮಂಜುಳಾ, ದಿವ್ಯ ಹಾಗೂ ಮುಂತಾದವರು ಉಪಸ್ಥಿತರಿದ್ದರು.









