
ಮಡಿಕೇರಿ ಡಿ.13 NEWS DESK : ಜಿಲ್ಲಾ ವ್ಯಾಪ್ತಿಯ ಸಿ ಮತ್ತು ಡಿ ವರ್ಗದ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬದುಕು ಕಟ್ಟಿಕೊಂಡಿರುವ ಬಡ ಕೃಷಿಕರ ಕೃಷಿ ಭೂಮಿಯನ್ನು ಮೀಸಲು ಅರಣ್ಯವೆಂದು ಘೋಷಿಸಕೂಡದೆಂದು ಆಗ್ರಹಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯಡಿ ಸೋಮವಾರಪೇಟೆಯ ರೈತ ಹೋರಾಟ ಸಮಿತಿಯಿಂದ ಡಿ.20 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿ ಮತ್ತು ಡಿ ಜಮೀನುಗಳನ್ನು ಈ ಹಿಂದೆಯೇ ಕ್ರಮ ಬದ್ಧವಲ್ಲದ ರೀತಿಯಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಇದೀಗ ಈ ಜಾಗವನ್ನು ಮೀಸಲು ಅರಣ್ಯವೆಂದು ಘೋಷಣೆ ಮಾಡುವ ಆದೇಶ ಹೊರಡಿಸುವ ಪ್ರಯತ್ನ ನಡೆದಿದೆ. ಇದನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. ಈ ಸಮಸ್ಯೆ ಕೇವಲ ಸೋಮವಾರಪೇಟೆ ತಾಲ್ಲೂಕಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಎಲ್ಲಾ ಭಾಗಗಳಲ್ಲು ಈ ಸಂಕಷ್ಟವನ್ನು ಕೃಷಿಕರು ಎದುರಿಸುತ್ತಿದ್ದಾರೆ. ಸಿ ಮತ್ತು ಡಿ ಭೂಮಿಯನ್ನು ಮೀಸಲು ಅರಣ್ಯವೆಂದು ಘೋಷಿಸಿದಲ್ಲಿ ಕೊಡಗಿನ ಸುಮಾರು 20 ರಿಂದ 25 ಸಾವಿರ ಏಕರೆ ಕೃಷಿ ಭೂಮಿ ಕೃಷಿಕರ ಕೈ ತಪ್ಪಿ ಹೋಗಲಿದೆಯೆಂದು ಆತಂಕ ವ್ಯಕ್ತಪಡಿಸಿದರು.
ಸಮಸ್ಯೆಯ ಗಂಭೀರತೆಯನ್ನು ಅರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸುತ್ತಿರುವ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ ಜಿಲ್ಲಾ ವ್ಯಾಪ್ತಿಯ ವಿವಿಧ ಸಂಘಟನೆಗಳು ಪಾಲ್ಗೊಳ್ಳಲಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚಿನ ಮಂದಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಅಂದು ಬೆಳಗ್ಗೆ ನಗರದ ಸುದರ್ಶನ ವೃತ್ತದಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ತಲುಪಿಸಲಾಗುತ್ತದೆ ಎಂದರು. ಸಮಿತಿಯ ಸಂಚಾಲಕ ಕೆ.ಎಂ.ಲೋಕೇಶ್ ಮಾತನಾಡಿ, ಸಿ ಮತ್ತು ಡಿ ಜಮೀನಿಗೆ ಸಂಬಂಧಿಸಿದಂತೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗೆಹರಿಕೆಗೆ ರೈತ ಹೋರಾಟ ಸಮಿತಿಯಿಂದ ಈಗಾಗಲೆ ಪ್ರತಿಭಟನೆಗಳು ನಡೆದಿವೆಯಾದರು ಸಮಸ್ಯೆ ಬಗೆಹರಿದಿಲ್ಲ. ಪ್ರಸ್ತುತ ಜಿಲ್ಲಾ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬದುಕು ನಡೆಸುತ್ತಿರುವ 15 ಸಾವಿರಕ್ಕೂ ಹೆಚ್ಚಿನ ಕೃಷಿಕರಿದ್ದಾರೆ. ಕೃಷಿ ಮಾಡುತ್ತಿರುವ ಜಮೀನನ್ನು ಕನಿಷ್ಟ ‘ಗುತ್ತಿಗೆ’ ಆಧಾರದಲ್ಲಾದರು ನೀಡಲು ಅಗತ್ಯ ಕ್ರಮ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರಾದ ಎಸ್.ಬಿ.ಭರತ್ ಕುಮಾರ್, ಆದಿತ್ಯ ಹಾಗೂ ಕಾನೂನು ಸಲಹೆಗಾರ ದೀಪಕ್ ಬಿ.ಜೆ. ಉಪಸ್ಥಿತರಿದ್ದರರು.









