
ಕೊಯನಾಡು ಏ.17 NEWS DESK : ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ವತಿಯಿಂದ 28ನೇ ಸ್ವಲಾತ್ ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ನಡೆಯಿತು. ಮಸೀದಿ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸುನ್ನಿ ಮುಸ್ಲಿಂ ಜುಮಾ ಮಸೀದಿ ಖತೀಬರಾದ ಮಹಮ್ಮದ್ ಸಖಾಫಿ ಅಲ್ ಹಿಕಮಿ ಉದ್ಘಾಟಿಸಿ ಮಾತನಾಡಿ, “ಎಲ್ಲಾ ರೀತಿಯ ಮಾನಸಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಒಂದೇ ಪರಿಹಾರವಾಗಿದೆ. ನಿರಂತವಾಗಿ ಸಕಲ ಸಂಕಷ್ಟಗಳಿಗೆ ಸ್ವಲಾತ್ ಹೆಚ್ಚಿಸುವುದೊಂದೇ ಪರಿಹಾರ” ಎಂದು ಹೇಳಿದರು. “ಮಾದಕ ವ್ಯಸನಗಳು ಸಮಾಜದ ಒಳಗೆ ನುಸುಳಿಕೊಂಡು ಅನೇಕ ಅಕ್ರಮ ಅನೈತಿಕತೆಗಳು ನಡೆಯುತ್ತಿದೆ. ಮಾದಕ ವ್ಯಸನಗಳಿಂದಾಗಿ ಯುವ ಸಮೂಹ ಅಕ್ರಮಗಳಿಗೆ ಮುಂದಾಗುತ್ತಿದ್ದಾರೆ. ಮಾದಕತೆಯ ಪ್ರಭಾವದಿಂದ ಸ್ವಂತ ತಾಯಿ ಮತ್ತು ಸಹೋದರಿ ಎಂದು ಅರಿಯದೇ ಸ್ವಂತ ರಕ್ತದ ಕುಡಿಗಳೇ ಅವರ ಮೇಲೆ ಅಕ್ರಮ ಎಸಗುವಂತ ಕಾಲ ಇದಾಗಿದೆ. ಆದ್ದರಿಂದ ಸಮುದಾಯವು ಈ ಬಗ್ಗೆ ಜಾಗೃತರಾಗಬೇಕಿದೆ” ಎಂದು ಉಸ್ತಾದರು ಕರೆ ನೀಡಿದರು. ಮುಖ್ಯ ಪ್ರಭಾಷಣ ಮಾಡಿದ ಅಬ್ದುಲ್ ರಝಾಕ್ ಅಬ್ರಾರಿ ಉಸ್ತಾದ್ “ಅಲ್ಲಾಹನು ನಿಮಗೆ ಸ್ವರ್ಗದ ಬಾಗಿಲನ್ನು ತೆರೆದಿಡಬೇಕಾದರೆ ತಂದೆ ತಾಯಿಯನ್ನು ನೋಡಿಕೊಳ್ಳಬೇಕು, ತಂದೆ ತಾಯಿಯ ಆಶಿರ್ವಾದವಿಲ್ಲದೇ ಸ್ವರ್ಗ ಪ್ರವೇಶ ಸಾಧ್ಯವಿಲ್ಲ, ತಾಯಿಯಂದಿರು ತಮ್ಮ 9 ತಿಂಗಳು ಹೊತ್ತು ಹೆತ್ತು ಬೆಳಸಿದ ರೋಚಕ ಕಥೆಯಲ್ಲಿ ಮಗುವಿನ ತಂದೆಯ ಜವಾಬ್ದಾರಿಯ ಕಷ್ಟದ ಸಂಕಷ್ಟದ ಕಥೆಗಳನ್ನು ಹೇಳಿಕೊಡಬೇಕು ಎಂದರು. “ಮುಸ್ಲಿಂ ನಾಮದಾರಿಯಾಗಿ ಜೀವನ ನಿರ್ವಹಿಸುವುದರಿಂದ ಮುಸ್ಲಿಂ ಆಗಿರಲು ಸಾಧ್ಯವಿಲ್ಲ! ಇಸ್ಲಾಮಿನ ನೈಜ ಆದರ್ಶಗಳೊಂದಿಗೆ ಅದನ್ನು ಪರಿಪಾಲಿಸಿ ಮೈಗೂಡಿಸಿಕೊಂಡಲ್ಲಿ ಮಾತ್ರ ಒಬ್ಬ ನೈಜ ಮುಸ್ಲಿಂ ಆಗಲು ಸಾಧ್ಯ” ಎಂದು ಎಚ್ಚರಿಸಿದರು. ಸಮಾರೋಪ ಸಮಾರಂಭದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ದುವಾಃ ನೇತೃತ್ವ ವಹಿಸಿದ್ದ ಸಯ್ಯದ್ ಸೀದೀ ಕೋಯ ಅಲ್ ಅಹ್ಸನಿ ತಂಙಳ್ ಮಾತನಾಡಿ “ಅಲ್ಲಾಹನ ಔಲಿಯಾ , ಉಲಮಾ, ಸಾದಾತ್ ಗಳ ಅನುಸ್ಮರಣೆ ಮಾಡುವುದು ಮತ್ತು ಅವರ ಕೀರ್ತನೆಗಳು ಹೇಳುವುದರ ಮುಖಾಂತ ನಮ್ಮ ಜೀವನದಲ್ಲಿ ಮಾಡಿಟ್ಟ ಪಾಪಗಳನ್ನು ಅಲ್ಲಾಹನು ಕ್ಷಮಿಸಲು ಕಾರಣವಾಗಬಹುದು” ಎಂದು ಹೇಳಿದರು. ಜಮಾಅತ್ ಅಧ್ಯಕ್ಷ ಹಾಜಿ ಎಸ್.ಮೊಯಿದಿನ್ ಕುಂಞಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆ ನಿರ್ವಹಿಸಲು ತೆರಳುತ್ತಿರುವ ಯುವ ಉದ್ಯಮಿ ಹೆಚ್.ಎ.ಅಶ್ರಫ್ ಬಾಲೆಂಬಿ ಮತ್ತು ಅವರ ಪುತ್ರ ಅಫಾನ್ ಹಾಗೂ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರನ್ನು ಸಮಾರಂಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಮದ್ರಸ ರಗಂದಲ್ಲಿ 25 ವರ್ಷ ಸೇವೆಯನ್ನು ಸಲ್ಲಿಸಿದ ಮುಅಲ್ಲಿಂರಿಗೆ ನೀಡುವ ಪ್ರಶಸ್ತಿಯಾದ ಇಹತೀರಾಮ್ ಅವಾರ್ಡ್ ಅನ್ನು ಸ್ವೀಕರಿಸಿದ ಸುನ್ನಿ ಮುಸ್ಲಿಂ ಜುಮಾ ಮಸೀದಿ ಮಾಜಿ ಖತೀಬ್ ಅಬ್ದುಲ್ ಖಾದರ್ ಮದನಿ ಅವರಿಗೆ ಜಮಾಅತ್ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ದೇವರಕೊಲ್ಲಿ ಬದ್ರಿಯಾ ಮಸೀದಿ ಇಮಾಂ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದ್ ಸ್ವಾಗತಿಸಿದರು.









