
ಕುಶಾಲನಗರ ಏ.17 NEWS DESK : ಕುಶಾಲನಗರ ಪುರಸಭೆ ವತಿಯಿಂದ 2025 ಮತ್ತು 2026 ರ ಆಸ್ತಿ ತೆರಿಗೆಯಲ್ಲಿ ಬಹಳ ಹೆಚ್ಚಳವಾಗಿದ್ದು, ಅದು ಅವೈಜ್ಞಾನಿಕವಾಗಿದೆ. ಅದನ್ನು ಸರಿಪಡಿಸಿಕೊಂಡು ಜನರಿಂದ ತೆರಿಗೆ ಸಂಗ್ರಹ ಮಾಡಬೇಕೆಂದು ಕುಶಾಲನಗರ ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಮನವಿ ಮಾಡಿಕೊಳ್ಳಲಾಯಿತು. ಕಳೆದ ವರ್ಷದ ತೆರಿಗೆಗೆ ಈ ವರ್ಷ ಶೇ.3 ಹೆಚ್ಚಳ ಮಾಡಲಾಗಿದ್ದರು ಅಂತಿಮ ಹಂತದ ತೆರಿಗೆ ನೋಡಿದಾಗ ಅದು ಶೇ.15 ರಿಂದ ಶೇ.20 ಹೆಚ್ಚಳವಾಗಿರುವುದು ಕಂಡು ಬಂದಿದೆ. ಅದು ಅವೈಜ್ಞಾನಿಕ ಹೆಚ್ಚಳ ಮತ್ತು ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಅದನ್ನು ಆದ್ಯತೆ ಮೇರೆಗೆ ತಪ್ಪಿಸಲು ಅಧ್ಯಕ್ಷ ಕೆ.ಎಸ್.ನಾಗೇಶ್ ಅಧಿಕಾರಿಗಳಿಗೆ ತಿಳಿಸಿದರು. ಮುಂದುವರಿದು ಉದ್ದಿಮೆದಾರ ಟ್ರೇಡ್ ಲೈಸನ್ಸ್ ಗೂ ವಿಪರೀತ ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡಬಲ್ ಆಗಿರುವುದನ್ನು ತಿಳಿಸಿದರು. ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ತೆರಿಗೆ ಹೆಚ್ಚಳ ಮಾಡುವುದಕ್ಕೆ ಸರಿಯಾಗಿ ಜನರ ಅವಶ್ಯಕತೆಗಳನ್ನು ಈಡೇರಿಸಲು ಒತ್ತಾಯಿಸಿದರು. ಉದ್ದಿಮೆಗಳನ್ನು ಕನಿಷ್ಠ 4 ಪಂಗಡಗಳಾಗಿ ವಿಂಗಡಿಸಿ ಟ್ರೇಡ್ ಲೈಸನ್ಸ್ ನ ತೆರಿಗೆ ಪಡೆಯಲು ವಿನಂತಿಸಿದರು. ಅನಧಿಕೃತ ಬೀದಿಬದಿ ವ್ಯಾಪಾರಿಗಳಿಂದ ತೆರಿಗೆ ಕಟ್ಟುವ ವ್ಯಾಪಾರಸ್ಥರಿಗೆ ಅನಾನುಕೂಲ ಆಗುತ್ತಿರುವ ಬಗ್ಗೆ ವಿವರಿಸಿದರು.
ಕುಶಾಲನಗರ ಪ್ರಮುಖ ಸ್ಥಳಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ಆಟೋ ನಿಲ್ದಾಣ ಮಾಡಿಕೊಳ್ಳುತ್ತಿರುವ ಬಗ್ಗೆಯೂ ನಿರ್ದೇಶಕ ಪಿ.ಎಂ.ಮೋಹನ್ ಪುರಸಭೆ ಗಮನ ಸೆಳೆದರು. ಈ ಎಲ್ಲ ಬೇಡಿಕೆಗಳಿಗೂ ಮುಖ್ಯಾಧಿಕಾರಿ ಗಿರೀಶ್, ಅಧ್ಯಕ್ಷೆ ಜಯಲಕ್ಷ್ಮಿ ಮತ್ತು ಸದಸ್ಯರು ಉತ್ತಮ ಸ್ಪಂದನೆ ನೀಡಿದರು. ಎಲ್ಲ ಸದಸ್ಯರನ್ನು ಈ ಕೂಡಲೇ ಸಂಪರ್ಕ ಮಾಡಿ, ಆದಷ್ಟು ಬೇಗ ಪುರಸಭೆಯ ಸಾಮಾನ್ಯ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಧ್ಯಕ್ಷೆ ಜಯಲಕ್ಷ್ಮಿ ತಿಳಿಸಿದರು. ಜನರಿಗೆ ತೊಂದರೆ ಕೊಟ್ಟು ಏನು ಮಾಡುವುದಿಲ್ಲ ಎಂದು ಮುಖ್ಯಾಧಿಕಾರಿ ಗಿರೀಶ್ ತಿಳಿಸಿದರು. ಮುಂದಿನ ಸೋಮವಾರದಿಂದ ರಥ ಬೀದಿಯ ವಾಸವಿ ಮಹಲ್ ಸಭಾಂಗಣದಲ್ಲಿ ಜನರ ಅನುಕೂಲಕ್ಕಾಗಿ ಪುರಸಭೆ ವತಿಯಿಂದ ತೆರಿಗೆ ಸಂಗ್ರಹ ಮಾಡಲು ಅಭಿಯಾನ ನಡೆಸುತ್ತೇವೆ. ಅಲ್ಲಿ ಜನರ ಎಲ್ಲ ರೀತಿಯ ತೆರಿಗೆ ಸಂಗ್ರಹ ಮಾಡುವುದರಿಂದ ಬಹಳಷ್ಟು ಜನಕ್ಕೆ ಸಹಾಯವಾಗಲಿದೆ ಎನ್ನುವ ಚೇಂಬರ್ ಬೇಡಿಕೆಗೆ ಒಪ್ಪಿಗೆ ಸೂಚಿಸಿದರು. ಕುಶಾಲನಗರ ಚೆಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಕೆ.ಎನ್.ದೇವರಾಜ್, ಚಂದ್ರು, ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಸುರೇಶ್, ಆನಂದ್, ಆರೋಗ್ಯಾಧಿಕಾರಿ ಉದಯ್, ಆರ್ ಐ ರಾಮು ಇತರರು ಹಾಜರಿದ್ದರು.









