
ಮಡಿಕೇರಿ ಏ.18 NEWS DESK : ಸಿದ್ದಾಪುರ- ಪಾಲಿಬೆಟ್ಟ ರಸ್ತೆಯ ತೂಪನಕೊಲ್ಲಿ ಎಂಬಲ್ಲಿ ಮುಂಜಾನೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ನಡು ರಸ್ತೆಯಲ್ಲೇ ವಾಯು ವಿಹಾರ ಮಾಡುತ್ತಿದ್ದ 10ಕ್ಕೂ ಹೆಚ್ಚು ಕಾಡಾನೆಗಳನ್ನು ಕಂಡು ವಾಹನ ಚಾಲಕರು ಮಾರ್ಗ ಬದಲಾಯಿಸಿದರು.
ಅಕ್ಕಪಕ್ಕದ ತೋಟ ಅಥವಾ ಕಾಡಿಗೆ ತೆರಳದ ಗಜಪಡೆ ರಸ್ತೆಯ ಮೂಲಕವೇ ಸಂಚರಿಸಿದವು. ಈ ಮಾರ್ಗವಾಗಿ ಬಂದ ವಾಹನ ಚಾಲಕರು ಮುಂದೆ ಸಾಗದೆ ಆತಂಕದಿಂದ ಬೇರೆ ರಸ್ತೆಯ ಮೂಲಕ ತೆರಳಿದರು. ತೂಪನಕೊಲ್ಲಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಸುತ್ತಮುತ್ತಲಿನ ತೋಟಗಳಲ್ಲಿದ್ದ 2-3 ವರ್ಷದ ಅಡಿಕೆ ಗಿಡಗಳನ್ನು ಸಂಪೂರ್ಣ ನಾಶ ಮಾಡಿದೆ. ಯಾವುದೇ ಕೃಷಿ ಫಸಲು ಕೈಗೆ ಸಿಗುತ್ತಿಲ್ಲ, ಬದಲಿಗೆ ಕಾಡಾನೆಗಳ ಪಾಲಾಗುತ್ತಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯ ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿಗಟ್ಟಬೇಕು ಮತ್ತು ಬೆಳೆನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.









