
ನಾಪೋಕ್ಲು ಏ.19 NEWS DESK : ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಭಾಗ್ಯವತಿ ಗ್ರಾಮ ಪಂಚಾಯಿತಿ ಸದಸ್ಯರ ಪೋಷಕರ ದಾನಿಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಅಂಗನವಾಡಿ ಕೇಂದ್ರ ಉತ್ತಮ ಮಟ್ಟದಲ್ಲಿ ನಡೆಯಲು ಕಾರಣಕರ್ತರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಹೇಳಿದರು. ನಾಪೋಕ್ಲು ಭಗವತಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಲ್ಲಮಾವಟ್ಟಿ ವೃತ್ತದ ಹಳೆ ತಾಲ್ಲೂಕು ಅಂಗನವಾಡಿ ಕೇಂದ್ರದ ಗ್ರಾಜುಯೇಷನ್ ಡೇ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಾತನಾಡಿದರು. ಭಾಗ್ಯವತಿ ಅವರು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸುವಂತಾಗಲಿ ಎಂದು ಆಶಿಸಿದರು. ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಿವೃತ್ತ ಪ್ರೊ.ಕಲ್ಯಾಣ ಪೂಣಚ್ಚ ಉದ್ಘಾಟಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯುವರಾಜ್, ಮೇಪಡಂಡ ಸವಿತಾ ಕೀರ್ತನ್, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೀತಾಲಕ್ಷ್ಮಿ, ದಂತ ವೈದ್ಯೆ ನೂರ್ ಫಾತಿಮಾ, ಬಾಲ ವಿಕಾಸ ಸಮಿತಿಯವರು ದಾನಿಗಳು ಪೋಷಕ ವೃಂದ ಹಾಜರಿದ್ದರು. ಈ ಸಂದರ್ಭ ಮಕ್ಕಳಿಗೆ ವಿವಿಧ ಆಟೋ ಸ್ಪರ್ಧೆಗಳನ್ನು ಬರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯರಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಪುನಃ ಚೇತನ ಸಂಸ್ಥೆಯ ಅಧ್ಯಕ್ಷರಾದ ಬಾಳೆಯಡ ದಿವ್ಯ ಮಂದಪ್ಪ, ಜಾನಪದ ಕಲೆಯಲ್ಲಿ ಪ್ರವೀಣತೆ ಪಡೆದ ಬೊಪ್ಪಂಡ ಬೊಳ್ಳಮ್ಮ ನಾಣ್ಣಯ್ಯ, ಬೊಪ್ಪಂಡ ಯಶೋಧ, ಶೌರ್ಯ ತಂಡ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ಜರುಗಿದ ಮಕ್ಕಳ ಹಾಗೂ ಪೋಷಕರ ಸಾಂಸ್ಕೃತಿಕ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ.









