
ಮಡಿಕೇರಿ ಏ.19 NEWS DESK : ಕೊಡಗು ಗೌಡ ಸಮಾಜಗಳ ಒಕ್ಕೂಟದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಆನಂದ್ ಕರಂದ್ಲಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಶ್ ತೇನನ, ಎರಡನೇ ಬಾರಿಗೆ ಕಾರ್ಯದರ್ಶಿಯಾಗಿ ಉದಯ್ ಪೇರಿಯನ, ಖಜಾಂಚಿಯಾಗಿ ನವೀನ್ ಅಂಬೆಕಲ್, ಜಂಟಿ ಕಾರ್ಯದರ್ಶಿಯಾಗಿ ಕೊಡಪಾಲು ಗಣಪತಿ, ನಿರ್ದೇಶಕರುಗಳಾಗಿ ಪೇರಿಯನ ಜಯಾನಂದ, ಚಿಲ್ಲನ ಗಣಿಪ್ರಸಾದ್, ಕೊಡಗನ ಹರ್ಷ, ಕುಯ್ಯಮುಡಿ ಅಶ್ವಿನಿ ಕುಮಾರ್, ಬೇಕಲ್ ಬಿಪಿನ್, ಪುಳಕಂಡ್ರ ಸುದೀಪ್, ಕುಯ್ಯಮುಡಿ ರಂಜು ಪಾಣತ್ತಲೆ, ಜಗದೀಶ್ ಮಂದಪ್ಪ, ಕೊಂಬಾರನ ರೋಷನ್, ಮೊಟ್ಟನ ಕರುಣ, ಪುದಿಯನೆರವನ ರೇವತಿ ರಮೇಶ್ ಹಾಗೂ ಕುಂಬುಗೌಡನ ಜಲಜ ವಿನೋದ್ ನೇಮಕಗೊಂಡಿದ್ದಾರೆ. ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮಾಜಿ ಅಧ್ಯಕ್ಷ ಸೂರ್ತಲೆ ಸೋಮಣ್ಣ ಅವರು ನೂತನ ಅಧ್ಯಕ್ಷ ಆನಂದ್ ಕರಂದ್ಲಾಜೆ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಆನಂದ್ ಕರಂದ್ಲಾಜೆ ಅವರು ಗೌಡ ಸಮಾಜಗಳ ಹಾಗೂ ಜನಾಂಗ ಬಾಂಧವರ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಜನಾಂಗಗಳೊಂದಿಗೆ ಅರೆಭಾಷೆ ಒಕ್ಕಲಿಗ ಗೌಡರು ಶಾಂತಿ ಮತ್ತು ಸಮನ್ವಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಸಾಮರಸ್ಯವನ್ನು ಹೀಗೆ ಮುಂದುವರಿಸಲು ಆದ್ಯತೆ ನೀಡಲಾಗುವುದು. ಗೌಡ ಜನಾಂಗವನ್ನು ಮತ್ತಷ್ಟು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಕಾರ್ಯ ಚಟುವಟಿಕೆಗಳನ್ನು ರೂಪಿಸಿ ಒಗ್ಗಟ್ಟಿನಿಂದ ಮುನ್ನಡೆಯಲಾಗುವುದು ಎಂದರು.









