
ಮಡಿಕೇರಿ ಏ.21 NEWS DESK : ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ ಖಂಡನೀಯ ಮತ್ತು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಕೃತ್ಯವಾಗಿದೆ ಎಂದು ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಮಠ ಮಂದಿರ ಪ್ರಮುಖ್ ಡಾ.ಮಹಾಬಲೇಶ್ವರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸುವ ಮೂಲಕ ಇಡೀ ಬ್ರಾಹ್ಮಣ ಸಮಾಜಕ್ಕೆ ಅವಮಾನ ಮಾಡಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರ ಜಾತ್ಯಾತೀತತೆಯ ಹೆಸರಿನಲ್ಲಿ ಬಹುಸಂಖ್ಯಾತ ಹಿಂದುಗಳ ಭಾವನೆ ಕೆರಳಿಸುವ ಕೆಲಸ ಮಾಡಿದೆ. ಬ್ರಾಹ್ಮಣರ ಮನೋಬಲ ಕುಗ್ಗಿಸುವ ಪ್ರಯತ್ನ ಇದರಲ್ಲಿ ಅಡಗಿದೆ ಎಂದು ಆರೋಪಿಸಿದ್ದಾರೆ. ಬ್ರಾಹ್ಮಣರಿಗೆ ಗುರುಗಳ ಮೂಲಕ ಜನಿವಾರವನ್ನು ಹಾಕಲಾಗುತ್ತದೆ, ಇದನ್ನು ದೇವರ ಆತ್ಮಸೂತ್ರ ಎಂಬ ಭಾವನೆಯಿಂದ ನೋಡಲಾಗುತ್ತದೆ. ಈ ಜನಿವಾರವನ್ನು ವ್ಯಕ್ತಿ ಸತ್ತಾಗ ಅಥವಾ ಸನ್ಯಾಸ ದೀಕ್ಷೆ ಪಡೆಯುವಾಗ ಮಾತ್ರ ತೆಗೆಯುವ ಕ್ರಮವಿರುತ್ತದೆ. ಇದರ ಅರಿವಿದ್ದರೂ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ನಿಯಮಬಾಹಿರವಾಗಿ ತೆಗೆದು ಅವಮಾನಿಸಲಾಗಿದೆ. ಇದಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸರ್ಕಾರವೇ ನೇರಹೊಣೆ ಎಂದು ಡಾ.ಮಹಾಬಲೇಶ್ವರ ಭಟ್ ಟೀಕಿಸಿದ್ದಾರೆ.









