
ಮಡಿಕೇರಿ ಏ.22 NEWS DESK : ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಪ್ರಮುಖರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮ ಖಂಡನೀಯ, ಈ ತಪ್ಪೆಸಗಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜನಿವಾರವನ್ನು ಉಪನಯನದ ಕಾರ್ಯಕ್ರಮದಲ್ಲಿ ತಂದೆಯು ಪವಿತ್ರವಾದ ಗಾಯತ್ರಿ ಮಂತ್ರವನ್ನು ಉಪದೇಶಿಸಿ ನೆರೆದ ಗುರುಹಿರಿಯರ ಆರ್ಶೀವಾದದೊಂದಿಗೆ ವಟುವಿಗೆ ಹಾಕುತ್ತಾರೆ. ಜನಿವಾರದಲ್ಲಿ ಗಾಯತ್ರಿ ದೇವಿ ಹಾಗೂ ಸೂರ್ಯನ ಆವಾಹನೆ ಮಾಡಲಾಗಿರುತ್ತದೆ. ಜನಿವಾರ ಧಾರಣೆಯು ರಾಮಯಣದ ಕಾಲದಿಂದಲೇ ರೂಢಿಯಲ್ಲಿದೆ.
ಜನಿವಾರ ಧಾರಣಿಯು ಸನಾತನ ಧರ್ಮದ ಪದ್ಧತಿಯಾಗಿದ್ದು, ಸಂವಿಧಾನದಲ್ಲೂ ಈ ಕುರಿತು ಆಕ್ಷೇಪ ಇಲ್ಲದಿರುವಾಗ ವಿದ್ಯಾರ್ಥಿಗಳ ಮಾನಸಿಕತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಸಿಬ್ಬಂದಿಯ ವರ್ತನೆ ಕ್ಷಮಾರ್ಹವಲ್ಲ. ಜನ ಪ್ರತಿನಿಧಿಗಳು, ಸಾಮಾಜಿಕ ಮುಖಂಡರು, ಧಾರ್ಮಿಕ ಮುಖಂಡರು ಒಂದಾಗಿ ದನಿ ಎತ್ತಿದರೆ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರೋಪಾಯವನ್ನು ಸರ್ಕಾರವು ಕಂಡುಕೊಂಡು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡಬೇಕು. ಸಿಇಟಿ, ಸರಕಾರಿ, ಖಾಸಗಿ ಸಂಸ್ಥೆಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆಗಳ ದೃಷ್ಟಿಯಿಂದ ತಪಾಸಣೆ ನಡೆಸುವುದು ತಪ್ಪಲ್ಲ, ಆದರೆ ಈ ರೀತಿಯ ಕ್ರಮಗಳಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲಾಗುವ ಪರಿಣಾಮ ಹಾಗೂ ಹೆತ್ತವರಿಗೆ ಉಂಟಾಗುವ ಕಷ್ಟನಷ್ಟಗಳ ಕುರಿತು ಚಿಂತನೆ ನಡೆಸಬೇಕು ಎಂದು ತಿಳಿಸಿದರು. ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಸಿ.ರಾಮಚಂದ್ರ ಮೂಗೂರು, ಕಾರ್ಯದರ್ಶಿ ಬಿ.ಕೆ.ಜಗದೀಶ್, ಖಜಾಂಚಿ ರವಿಶಂಕರ್, ಮಾಜಿ ಅಧ್ಯಕ್ಷ ಬಿ.ಜಿ.ಅನಂತಶಯನ, ನಿರ್ದೇಶಕರಾದ ಸಂಪತ್ ಕುಮಾರ್, ಅರುಣ್ ಕುಮಾರ್, ಭಾರತೀಶ್, ಪರುಶೋತ್ತಮ, ರಮೇಶ್ ಹೊಳ್ಳ, ಸವಿತಾಭಟ್, ಮಂಜುಳಾ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









