
ಮಡಿಕೇರಿ ಮೇ 23 NEWS DESK : ದೇಸಿ ಬೆಳೆಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ “ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು 2024 ರ ಆಯವ್ಯಯದಲ್ಲಿ ಪೋಷಣೆ ಮಾಡಲಾಗಿದೆ. ಆಯಾಯ ಪ್ರದೇಶದಲ್ಲಿ ರೈತರು ತಲೆಮಾರುಗಳಿಂದ ಬೆಳೆದ ಸಾಂಪ್ರದಾಯಿಕ ಪ್ರಭೇದಗಳು, ಸ್ಥಳೀಯ ಕೃಷಿ ಪದ್ದತಿ ಪ್ರದೇಶಕ್ಕೆ ಹೊಂದಿಕೊಂಡು ವಿಶಿಷ್ಟ ಗುಣಲಕ್ಷಣ ಹೊಂದಿರುವ ಬೆಳೆಗಳನ್ನು ದೇಸಿ ಬೆಳೆಗಳೆಂದು ಕರೆಯಲಾಗುತ್ತದೆ. ಈ ಕಾರ್ಯಕ್ರಮದಡಿ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂಡೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು, ಗೋಧಿ, ಮೆಣಸಿನಕಾಯಿ ಮತ್ತು ಸಲಹಾ ಸಮಿತಿಯು ಶಿಪಾರಸ್ಸು ಮಾಡುವ ಬೆಳೆ ಒಳಪಡಿಸಲಾಗಿದೆ. ಇತ್ತೀಚೆಗೆ ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಮೂಲ ಸಮೀಕ್ಷೆಯ ಮೂಲಕ ಗುರುತಿಸಿ ಸಂರಕ್ಷಣೆ ಮಾಡುವ ಗುರಿ ಹೊಂದಲಾಗಿದೆ ಮತ್ತು ಹಿಂದಿನಿಂದಲೂ ಸಂರಕ್ಷಿಸಿ ದೇಸಿ ತಳಿ ಕೃಷಿ ಮಾಡುತ್ತಿರುವವರಿಗೆ ಬೆಂಬಲ ಪ್ರೋತ್ಸಾಹಧನವನ್ನು ಈ ಯೋಜನೆಯಡಿ ನೀಡಲಾಗುವುದು. ಈ ಯೋಜನೆಯಲ್ಲಿ ಪ್ರೋತ್ಸಾಹಧನ ಪಡೆಯಲು ರೈತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಇರಬೇಕು ಹಾಗೂ ಬೀಜ ಬ್ಯಾಂಕ್‍ನಲ್ಲಿ ತಳಿಗಳ ಬೀಜಗಳನ್ನು ಇರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ಧರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆ ಕೈಗೊಂಡಿರಬೇಕು. ಇದರಿಂದ ದೇಸಿ ತಳಿಗಳ ನಿರಂತರ ಕೃಷಿ ಪ್ರೋತ್ಸಾಹಿಸಲು ಜೀವ ವೈವಿಧ್ಯತೆ ಬೆಂಬಲಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿ ಪೋಷಿಸಲು ಸಹಕಾರಿಯಾಗಿದೆ. ದೇಸಿ ತಳಿಗಳನ್ನು ಬೆಳದು ಸಂರಕ್ಷಣೆ ಮಾಡುತ್ತಿರುವ ರೈತರು ಮೆ, 31 ಕ್ಕಿಂತ ಮುಂಚಿತವಾಗಿ ತಾವು ಬೆಳೆಯುತ್ತಿರುವ ಅಥವಾ ಸಂರಕ್ಷಣೆ ಮಾಡುತ್ತಿರುವ ಬೆಳೆಗಳ ವಿವರಗಳೊಂದಿಗೆ ನೋದಾಯಿಸಿಕೊಳ್ಳಲು ಹಾಗೂ ಈ ಯೋಜನೆಯ ಉಪಯೋಗವನ್ನು ಪಡೆಯುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಈ ಯೋಜನೆಯಡಿ ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ರೈತರು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.









