
ನಾಪೋಕ್ಲು ಮೇ 23 NEWS DESK : ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಶಿಬಿರಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬಹುದು ಎಂದು ನಿವೃತ್ತ ಶಿಕ್ಷಕಿ ಮಂಜಂಡ್ರ ರೇಖಾ ಉಲ್ಲಾಸ ಹೇಳಿದರು. ಕಕ್ಕಬ್ಬೆಯ ನಾಲಡಿ ಗ್ರಾಮದ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಮೇ 1 ರಿಂದ ನಾಲಡಿ ಅಂಬಲ ಹೊಳೆಯಲ್ಲಿ ಆಯೋಜಿಸಲಾಗಿದ್ದ ಈಜು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಳ ಶ್ರೇಯೋಭಿವೃದ್ಧಿಗೆ ಪೋಷಕರ ಸಹಕಾರ ಮುಖ್ಯವಾಗಿದ್ದು, ಇಂತಹ ತರಬೇತಿ ಶಿಬಿರಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಿವರ್ ಸ್ವಿಮ್ಮಿಂಗ್ ಕ್ಲಬ್ ನ ಅಧ್ಯಕ್ಷ ಬೊಲಿಯಾಡಿರ ಸಂತು ಸಂತ್ರಮಣಿ, ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಶಿಷ್ಟವಾದ ಈಜು ತರಬೇತಿ ಶಿಬಿರವನ್ನು ನುರಿತ ತರಬೇತಿದಾರರಿಂದ ಆಯೋಜಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಶಿಬಿರಕ್ಕೆ ಉತ್ತಮ ಪ್ರೋತ್ಸಾಹ ಇದೆ. ಈ ವರ್ಷ 45 ವಿದ್ಯಾರ್ಥಿಗಳು ಈಜು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು ಇದಕ್ಕೆ ಪೋಷಕರ ಸಹಕಾರ ಮುಖ್ಯವಾಗಿದೆ. ಇದರಲ್ಲಿ ತಜ್ಞ ತರಬೇತುದಾರರಾದ ಕಂಗಂಡ ಅಪ್ಪಚ್ಚ, ಕಾಂಡಂಡ ಸಜನ್, ಕಂಬೆಯಂಡ ತರುಣ್, ಬಾಚಮಂಡ ದೇವಯ್ಯ, ಕರೋಟಿರ ಪೂವಣ್ಣ ಭಾಗವಹಿಸಿ ಸೂಕ್ತ ಮಾರ್ಗದರ್ಶನ ಹಾಗೂ ನುರಿತ ತರಬೇತಿ ನೀಡಿದ್ದಾರೆ. ಶಿಬಿರಾರ್ಥಿಗಳು ಹೆಚ್ಚಿನ ತರಬೇತಿ ಪಡೆದುಕೊಂಡು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪಾಲ್ಗೊಂಡು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಅತಿಥಿಗಳಾಗಿ ಮಾಳೆಯಂಡ ಅಪ್ಪಣ್ಣ, ಅಪ್ಪಾರಂಡ ಸೀನುನಂಜಪ್ಪ, ಅಯ್ಯನೆರವಂಡ ಅಪ್ಪಣ್ಣ, ಚೇನಂಡ ಬೋಪಣ್ಣ ಉಪಸ್ಥಿತರಿದ್ದು, ಪೋಷಕರು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ










